ಬಿಪಿಎಲ್ ಕಾರ್ಡುದಾರರಿಗೆ ದಂಡ ನಿಲ್ಲಿಸದಿದ್ದಲ್ಲಿ ಕಾಂಗ್ರೆಸ್ ಉಗ್ರ ಹೋರಾಟ-ಶಕುಂತಳಾ ಶೆಟ್ಟಿ
ಪುತ್ತೂರು: ಸರ್ಕಾರವೇ ಕಂದಾಯ ಅಧಿಕಾರಿಗಳ ಮೂಲಕ ಬಿಪಿಎಲ್ ಕಾರ್ಡುಗಳನ್ನು ನೀಡಿದ್ದು, ಇದೀಗ ಅನರ್ಹ ಬಿಪಿಎಲ್ ಕಾರ್ಡು ರದ್ದು ಪಡಿಸುವ ಹೆಸರಿನಲ್ಲಿ ಅಮಾಯಕ ಕಾರ್ಡುದಾರರಿಗೆ ದಂಡ ವಿಧಿಸುವುದಕ್ಕೆ ಅರ್ಥವಿಲ್ಲ. ಈ ಮೂಲಕ ಸರ್ಕಾರವು ಜನ ಸಾಮಾನ್ಯರಿಗೆ ತೊಂದರೆ ನೀಡಿ ಅವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡುತ್ತಿದೆ. ಇದನ್ನು ತಕ್ಷಣವೇ ನಿಲ್ಲಿಸಬೇಕು,ಇಲ್ಲದಿದ್ದಲ್ಲಿ ಪಕ್ಷದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಆಗ್ರಹಿಸಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಿಪಿಎಲ್ ಕಾರ್ಡ್ ರದ್ದು ಪಡಿಸುವ ನೆಪದಲ್ಲಿ ಜನ ಸಾಮಾನ್ಯರಿಗೆ ದುಬಾರಿ ದಂಡ ವಿಧಿಸಲಾಗುತ್ತಿದೆ. ಇಲಾಖೆಯೇ ಈ ಹಿಂದೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಬಿಪಿಎಲ್ ಕಾರ್ಡ್ ನೀಡಿತ್ತು. ಅವರು ಮಾಡಿರುವ ತಪ್ಪಿಗೆ ಇದೀಗ ಫಲಾನುವಿಗಳಿಗೆ ದಂಡ ವಿಧಿಸುವುದು ಸರಿಯಲ್ಲ. ಬದಲಿಗೆ ಕಾರ್ಡ್ ನೀಡಿರುವ ಅಧಿಕಾರಿಗಳಿಗೆ ದಂಡ ವಿಧಿಸುವ ಕೆಲಸವಾಗಬೇಕು ಎಂದು ಒತ್ತಾಯಿಸಿದರು.
ಹಿಂದಿಗಿ0ತ ಆರ್ಥಿಕವಾಗಿ ಕೊಂಚ ಬಲಿಷ್ಠರಾದವರು ಸಹಜವಾಗಿ ಎಪಿಎಲ್ ಕಾರ್ಡ್ ಪಡೆಯಲು ಅನರ್ಹರಾಗಿರಬಹುದು. ಅಂಥ ಕಾರ್ಡ್ಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸುವುದು ತಪ್ಪಲ್ಲ. ಹಾಗೆಂದು ಇಲಾಖೆಯೇ ನೀಡಿದ ಕಾರ್ಡ್ಗೆ ಈಗ ಫಲಾನುಭವಿಗಳನ್ನು ತಪ್ಪಿತಸ್ಥರನ್ನಾಗಿ ಮಾಡುವುದು ಅಕ್ಷಮ್ಯವಾಗಿದೆ. ಬಿಪಿಎಲ್ ಕಾರ್ಡ್ದಾರರನ್ನು ವೈಜ್ಞಾನಿಕ ಸಂಶೋಧನೆಯ ಪ್ರಕಾರ ಪಟ್ಟಿ ಮಾಡಿ ಅನರ್ಹರನ್ನು ಕೈಬಿಟ್ಟು ಅವರನ್ನು ಎಪಿಎಎಲ್ ಪಟ್ಟಿಗೆ ಸೇರಿಸಬೇಕು ಎಂದರು.
ಹಿಂದೆ ಸರಕಾರದಿಂದ ಉಚಿತ ಅಕ್ಕಿ ಪಡೆದವರು ಈಗ ಅದಕ್ಕೆ ಹಣ ಕಟ್ಟಬೇಕು ಎಂದು ಹೇಳುವುದು ಸರಿಯಲ್ಲ. ಇದರಿಂದಾಗಿ ಒಂದೆಡೆ ಬಿಪಿಎಲ್ ಕಾರ್ಡ್ ಕಳೆದುಕೊಂಡ ಸಂಕಷ್ಟವಾಗಿದ್ದು, ಇನ್ನೊಂದೆಡೆ ದುಬಾರಿ ದಂಡ ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅನೇಕರಿಗೆ 13,000 ರೂ., 15,000, 20,000 ರೂ. ಇತ್ಯಾದಿ ಶ್ರೇಣಿಯಲ್ಲಿ ದಂಡ ಪಾವತಿಸಲು ನೊಟೀಸ್ ಬಂದಿದೆ. ನೂರಾರು ಮಂದಿ ಬಡವರು ನಮ್ಮ ಮುಂದೆ ಬಂದು ನೊಟೀಸ್ ತೋರಿಸಿ ಅಲವತ್ತುಕೊಳ್ಳುತ್ತಿದ್ದಾರೆ. 4 ಚಕ್ರದ ವಾಹನವಿದ್ದಲ್ಲಿ ಬಿಪಿಎಲ್ ಕಾರ್ಡ್ ಇಲ್ಲ ಎಂಬ ನಿಯಮ ತರಲಾಗಿದೆ. ಅನೇಕ ಕೂಲಿ ಕಾರ್ಮಿಕರು ಕೂಡ ಹಳೆಯ ಮಾಡೆಲ್‌ನ ಕಾರುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಬಳಸುತ್ತಿದ್ದಾರೆ. ಅದಕ್ಕಾಗಿ ಬಿಪಿಎಲ್ ಕಾರ್ಡ್ ರದ್ದು ಮಾಡುವ ನಿಯಮ ಸರಿಯಲ್ಲ ಎಂದರು.
ಪುತ್ತೂರು ಸೇರಿದಂತೆ ಅನೇಕ ಪೌರಾಡಳಿತ ಸಂಸ್ಥೆಗಳಲ್ಲಿ ಇನ್ನೂ ಜನಪ್ರತಿನಿಧಿಗಳ ಆಡಳಿತ ಬಂದಿಲ್ಲ. ಇದಕ್ಕೆ ಬಿಜೆಪಿ ಪಕ್ಷದ ಸದಸ್ಯರು ಕೋರ್ಟು ಮೆಟ್ಟಲೇರಿರುವುದು ಕಾರಣ. ಹಿಂದೆ ಮೈತ್ರಿ ಸರಕಾರ ಅಧಿಕಾರದಲ್ಲಿದ್ದಾಗ ಇದಕ್ಕೆಲ್ಲ ಸರಕಾರವೇ ಕಾರಣ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿತ್ತು. ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಪುತ್ತೂರಿನಲ್ಲಿ ಬಿಜೆಪಿ ಪ್ರತಿಭಟನೆ, ಪಾದಯಾತ್ರೆ ನಡೆಸಿತ್ತು. ಬಿಜೆಪಿ ಸರಕಾರ ಬಂದ ಮೇಲೂ ಕೇವಲ 15 ದಿನಗಳಲ್ಲಿ ಇದನ್ನು ಸರಿ ಮಾಡುವುದಾಗಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದರು. ಆದರೆ ಸರಕಾರಕ್ಕೆ ಈಗ 100 ದಿನ ತುಂಬಿದೆ. ಇನ್ನೂ ಬಿಜೆಪಿಯಾಗಲಿ ಸರಕಾರವಾಗಲಿ ಪೌರಾಡಳಿತದ ಅಧಿಕಾರ ನೀಡಿಲ್ಲ ಎಂದು ದೂರಿದರು.
ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕದೇ ತಾತ್ಕಾಲಿಕವಾಗಿ ಮುಂದೂಡಿರುವ ಹಾಗೂ ಅಡಕೆ ಅಧ್ಯಯನಕ್ಕೆ ಕಾರ್ಯಪಡೆ ರಚಿಸುವ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದೆ. ಆರ್‌ಸಿಇಪಿ ಒಪ್ಪಂದಕ್ಕೆ ಸರ್ಕಾರ ಮುಂದೆಯೂ ಬೆಂಬಲ ಶಾಶ್ವತವಾಗಿ ಸಹಿ ಹಾಕದಿರುವ ನಿರ್ಣಯ ಕೈಗೊಳ್ಳಬೇಕು. ಅಡಕೆ ಅಧ್ಯಯನ ಕಾರ್ಯಪಡೆ ಸಮಿತಿ ಆಯ್ಕೆ ಪಕ್ಷ ರಾಜೀಯಕ್ಕೆ ಸೀಮಿತವಾಗಿರದೆ ಅಡಕೆ ಬೆಳೆಗಾರರು ಹಾಗೂ ತಜ್ಞರನ್ನು ಒಳಗೊಂಡ ಸಮಿತಿ ರಚಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಎಂ.ಬಿ. ವಿಶ್ವನಾಥ ರೈ, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ನ್ಯಾಯವಾದಿ ನಿರ್ಮಲ್ ಕುಮಾರ್ ಜೈನ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಲೇರಿಯನ್ ಡಯಾಸ್, ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ಉಪಸ್ಥಿತರಿದ್ದರು.