×
Ad

‘ಇತಿಹಾಸ ತಿರುಚುವ ಬಿಜೆಪಿಯಿಂದ ಭವಿಷ್ಯ ನಿರ್ಮಾಣ ಸಾಧ್ಯವಿಲ್ಲ’

Update: 2019-11-06 20:36 IST

ಉಡುಪಿ, ನ.6: ಇತಿಹಾಸವನ್ನು ಸರಿಯಾಗಿ ತಿಳಿದುಕೊಂಡು, ಕಲಿಯುವವರಿಂದ ಭವಿಷ್ಯ ನಿರ್ಮಿಸಲು ಸಾಧ್ಯವಿದೆ. ಆದರೆ ಇತಿಹಾಸವನ್ನು ತಿರುಚುವ ಬಿಜೆಪಿಯಿಂದ ದೇಶದ ಭವಿಷ್ಯ ನಿರ್ಮಾಣ ಸಾಧ್ಯವಿಲ್ಲ ಎಂದು ರಾಜ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಅಜ್ಜರಕಾಡಿನಲ್ಲಿರುವ ಪುರಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಜಿಲ್ಲಾ ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ‘ಗಾಂಧಿ-150’ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ, ಸಂಘಟನೆಯ ವತಿಯಿಂದ ಕೊರಂಗ್ರಪಾಡಿಯ ದಲಿತ ಮಹಿಳೆ ನಳಿನಿಗೆ 4.80 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಸುಸಜ್ಜಿತ ಮನೆಯ ಕೀಲಿಕೈಯನ್ನು ಹಸ್ತಾಂತರಿಸಿ ಅವರು ಮಾತನಾಡುತ್ತಿದ್ದರು.

ಸದಾ ಸುಳ್ಳು ಹೇಳುತ್ತಾ, ಮುಸ್ಲಿಮರ ವಿರುದ್ಧ ದ್ವೇಷಕಾರುವ ಬಿಜೆಪಿ ಇದೀಗ, ರಾಜ್ಯದ ಶಾಲೆಯ ಮಕ್ಕಳು ಓದುವ ಇತಿಹಾಸ ಪುಸ್ತಕದಿಂದ ಟಿಪ್ಪುಸುಲ್ತಾನ್ ಹಾಗೂ ಹೈದರಾಲಿ ಅವರ ಇತಿಹಾಸವನ್ನು ತೆಗೆದುಹಾಕಲು ಹೊರಟಿದೆ. ಟಿಪ್ಪು ಸುಲ್ತಾನ್ ಹಾಗೂ ಹೈದರಾಲಿ ಇಲ್ಲದ ಇತಿಹಾಸ ರಾಜ್ಯ ಹಾಗೂ ಮೈಸೂರಿನ ಸಂಪೂರ್ಣ ಇತಿಹಾಸ ಎನಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ನುಡಿದರು.

ಇದೇ ಯಡಿಯೂರಪ್ಪ ಕೆಜೆಪಿಯ ಅಧ್ಯಕ್ಷರಾಗಿದ್ದಾಗ ಟಿಪ್ಪು ಪೇಟ ಹಾಕಿಕೊಂಡು, ಕೈಯಲ್ಲಿ ಖಡ್ಗ ಹಿಡಿದುಕೊಂಡು, ಶೋಭಾ ಕರಂದ್ಲಾಜೆ ಜೊತೆ ನಿಂತು ‘ನಾನೇ ಟಿಪ್ಪು’ ಎಂದಿದ್ದರು. ಹಾಗೆಯೇ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ, ಇತಿಹಾಸಜ್ಞ ಡಾ.ಷೇಕ್ ಅಲಿ ಅವರ ಟಿಪ್ಪು ಕುರಿತ ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ‘ಟಿಪ್ಪು ದೇಶಪ್ರೇಮಿ, ದೇಶಭಕ್ತ. ಬ್ರಿಟಿಷರ ವಿರುದ್ಧ ಹೋರಾಡಿದ ಮಹಾಶೂರ’ ಎಂದೆಲ್ಲಾ ಬರೆದಿದ್ದರು. ಅಲ್ಲದೇ ಅಶೋಕ್ ಹಾಗೂ ಇತರರೊಂದಿಗೆ ಟಿಪ್ಪು ವೇಷದಲ್ಲಿ ಖಡ್ಗ ಝಳಪಿಸುತ್ತಾ ಪೋಟೊಗೆ ಪೋಸು ನೀಡಿದ್ದರು.ಈಗ ಆತನನ್ನು ಮತಾಂಧ ಎನ್ನುತ್ತಾ ನಾಟಕವಾಡುತಿದ್ದಾರೆ ಎಂದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಜಯಂತಿ ಆರಂಭಿಸಿರುವುದಾಗಿ ಟೀಕಿಸುತ್ತಾರೆ. ಆದರೆ ನಾನೇ ಕಿತ್ತೂರು ಚೆನ್ನಮ್ಮ, ಕೆಂಪೇಗೌಡ, ನಾರಾಯಣ ಗುರು ಜಯಂತಿಯನ್ನೂ ಆರಂಭಿಸಿದ್ದೆ ಎಂಬುದನ್ನು ಮರೆಯುತ್ತಾರೆ. ಇವರೆಲ್ಲ ಪುರಾಣ ವ್ಯಕ್ತಿಗಳಲ್ಲ, ಐತಿಹಾಸಿಕ ವ್ಯಕ್ತಿಗಳು. ಹೀಗಾಗಿ ಇವರ ಜಯಂತಿ ಆಚರಿಸಲು ನಿರ್ಧರಿಸಿದೆ. ಹೈದರಾಲಿ ಮತ್ತು ಟಿಪ್ಪು ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧಗಳನ್ನು ಮಾಡಿದ್ದಾರೆ. ಭಾರತದ ಇತಿಹಾಸದಲ್ಲಿ ಇದನ್ನು ಯಾರೂ ಮಾಡಿಲ್ಲ ಎಂದರು.

ಕಾಂಗ್ರೆಸ್ ಕಾರ್ಯಕರ್ತರು ಇತಿಹಾಸವನ್ನು ಚೆನ್ನಾಗಿ ಅಧ್ಯಯನ ಮಾಡಬೇಕು. ದೇಶದ ಇತಿಹಾಸ ಚೆನ್ನಾಗಿ ತಿಳಿದರೆ ನಿಮ್ಮಲ್ಲಿ ಗೊಂದಲ ಇರುವುದಿಲ್ಲ. ಆಗ ಬಿಜೆಪಿ ಈಗ ನಡೆಸುತ್ತಿರುವ ಇತಿಹಾಸವನ್ನು ತಿರುಚಿ ಸತ್ಯ ಬಚ್ಚಿಟ್ಟು ಮಾಡುವ ಸುಳ್ಳು ಪ್ರಚಾರವನ್ನು ಅರಿತು ಜನರಿಗೆ ತಿಳಿಸಲು ಸಾಧ್ಯ ವಾಗುತ್ತದೆ. ಬಿಜೆಪಿಯಂತ ಫ್ಯಾಸಿಸ್ಟ್ ಪಕ್ಷ ಅಧಿಕಾರಕ್ಕೆ ಬರದಂತೆ ತಡೆಯುವುದು ಕಾಂಗ್ರೆಸ್‌ನ ಕರ್ತವ್ಯ ಹಾಗೂ ಇದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ನಮ್ಮ ಕಾರ್ಯಕರ್ತರು ಈ ಸಂಕಲ್ಪ ತೊಡಬೇಕು ಎಂದು ಸಿದ್ದರಾಮಯ್ಯ ನುಡಿದರು.

ದೇಶದಲ್ಲಿ ಮೂಲಭೂತ ಬದಲಾವಣೆಯನ್ನು ತಂದಿದ್ದು ಹಾಗೂ ತರಲು ಸಾಧ್ಯವಿರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕಳೆದ ಸುಮಾರು ಆರು ವರ್ಷಗಳಲ್ಲಿ ಹೇಳಿಕೊಳ್ಳುವ ಯಾವುದೇ ಯೋಜನೆ, ಕಾರ್ಯಕ್ರಮವನ್ನು ಮಾಡಿದ್ದಾರಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನೋಟುಗಳ ಅಪವೌಲ್ಯೀಕರಣ ಮಾಡಿದ್ದೇ ಅದಾನಿ, ಅಂಬಾನಿಗಳಂಥವರ ಕಪ್ಪು ಹಣವನ್ನು ಬಿಳಿ ಮಾಡಲು ಎಂಬುದು ಈಗ ಸಾಬೀತಾಗಿದೆ. ಇದರಿಂದ ಕಷ್ಟಕ್ಕೆ ಸಿಲುಕಿದವರು ಮಾತ್ರ ದೇಶದ ಬಡವರು ಎಂದರು.

ನರೇಂದ್ರ ಮೋದಿಯಂತೆ ಸುಳ್ಳು ಹೇಳುವ ಪ್ರಧಾನಿ ಭಾರತದ ಇತಿಹಾಸ ದಲ್ಲೇ ಬಂದಿಲ್ಲ. ಸುಳ್ಳುಗಳನ್ನೇ ಹೇಳುತ್ತಾ ಭಾವನಾತ್ಮಕ ವಿಷಯಗಳಿಂದ ದೇಶದ ಪರಿಸ್ಥಿತಿಯನ್ನು ತೀರಾ ಕೆಳಮಟ್ಟಕ್ಕಿಳಿಸಿದ್ದಾರೆ. ಸುಳ್ಳನ್ನೇ ಉಸಿರಾಡುವ ಬಿಜೆಪಿಗರು ನನ್ನನ್ನು ಸುಳ್ಳುಗಾರ ಎನ್ನುತ್ತಾರೆ. ಯಾವುದೇ ವಿಷಯದ ಕುರಿತು ಇವರು ಬಹಿರಂಗ ಚರ್ಚೆಗೆ ಬರಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ಈ ದೇಶ ಜಾತ್ಯತೀತವಾಗಿ ಉಳಿಯಲು, ಇಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಉಳಿಸಲು ಕೇವಲ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯವಿದೆ. ಬಿಜೆಪಿಯ ಸುಳ್ಳುಗಳನ್ನು ಬಹಿರಂಗ ಪಡಿಸಲು ತಾನು ಕರಾವಳಿ ಜಿಲ್ಲೆಗಳಲ್ಲಿ ಮತ್ತೊಮ್ಮೆ ‘ಸದ್ಭಾವನಾ ಜಾಥ’ ಮಾಡಲು ಸಿದ್ಧನಿದ್ದೇನೆ. ಬಿಜೆಪಿಗರ ಸುಳ್ಳುಗಳಿಂದ, ಅಪಪ್ರಚಾರಗಳಿಂದ, ದಾರಿ ತಪ್ಪಿಸುವ ನಡೆಗಳಿಂದ ಜನರನ್ನು ರಕ್ಷಿಸಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಬೇಕು. ಅವರಿಗೆ ಸತ್ಯವನ್ನು ತಿಳಿಸಲು ಈ ಜಾಥ ಮಾಡೋಣ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ ದೇಶಕ್ಕೆ ಗಾಂಧಿ, ನೆಹರೂ, ಪಟೇಲರು ಹಾಕಿಕೊಟ್ಟ ಭದ್ರ ಬುನಾದಿಯಿಂದ ದೇಶ ಇಂದು ಒಂದಾಗಿ ಉಳಿದಿದೆ. ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದಾಗಿ ದೇಶ ಗಟ್ಟಿಯಾಗಿದೆ. ಆದರೆ ಇಂದು ದ್ವೇಷದ ಮೂಲಕ ದೇಶದಲ್ಲಿ ಕೋಮುವಾದಿ ವಾತಾವರಣ, ವೈಷಮ್ಯವನ್ನು ಬೆಳೆಸಲಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಜನರಿಗೆ ತಿಳುವಳಿಕೆ ಮೂಡಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಬಾರಿ ಜನರಿಂದ ಚುನಾಯಿತರಾದ ಪಕ್ಷದ ಜನಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಭುಜಂಗ ಶೆಟ್ಟಿ, ಜನಾರ್ದನ ತೋನ್ಸೆ, ಅಮೃತ ಕೃಷ್ಣಮೂರ್ತಿ, ಸೀತಾರಾಮ ದೇವಾಡಿಗ, ಶ್ರೀನಿವಾಸ ಅಮೀನ್, ಸರಸು ಬಂಗೇರ, ದಯಾನಂದ ಬಂಗೇರ, ವೆರೋನಿಕಾ ಕರ್ನೇಲಿಯೊ ಮುಂತಾದವರು ಸನ್ಮಾನಿತರಾದರು.

ಕಾರ್ಯಕ್ರಮದಲ್ಲಿ ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ವಿಷ್ಣುನಾಥನ್, ಸಂದೀಪ್ ಬಿ.ಎನ್., ಮಾಜಿ ಶಾಸಕರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಯು.ಆರ್.ಸಭಾಪತಿ, ಗೋಪಾಲ ಪೂಜಾರಿ, ರಂಗಸ್ವಾಮಿ, ಐವಾನ್ ಡಿಸೋಜ, ನಾರಾಯಣ ಸ್ವಾಮಿ, ಎಂ.ಎ.ಗಫೂರ್, ಜಿ.ಎ.ಬಾವ, ಸರಳ ಕಾಂಚನ್ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು ಸ್ವಾಗತಿಸಿದರೆ, ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಜಿಲ್ಲಾ ಸಂಚಾಲಕಿ ರೋಶನಿ ಒಲಿವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸುನೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News