ಹಳ್ಳಿಯ ಮೇಲ್ಜಾತಿಯವರಿಂದ ಸಾಮಾಜಿಕ ಬಹಿಷ್ಕಾರ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಲಿತರು

Update: 2019-11-06 16:11 GMT

ಹೊಸದಿಲ್ಲಿ, ನ. 6: ಹರ್ಯಾಣದ ಹಳ್ಳಿಯೊಂದರಲ್ಲಿ ಮೇಲ್ಜಾತಿಯ ಜನರು ಸಾಮಾಜಿಕ ಬಹಿಷ್ಕಾರ ಹಾಕಿದ ಹಿನ್ನೆಲೆಯಲ್ಲಿ ದಲಿತ ಸಮುದಾಯದ ಸದಸ್ಯರು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದಾರೆ. ಗ್ರಾಮದ ಕೈಪಂಪ್‌ನಿಂದ ಕುಡಿಯುವ ನೀರು ಎತ್ತಲು ನಿರಾಕರಣೆ ಸಹಿತ ಪ್ರಬಲ ಸಮುದಾಯದಿಂದ ಎದುರಿಸುತ್ತಿರುವ ಸರಣಿ ದೌರ್ಜನ್ಯಗಳ ಕುರಿತು ದಲಿತ ಸಮುದಾಯದ ಸದಸ್ಯರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ, ಇದು ಗಂಭೀರ ವಿಚಾರ. ಆದುದರಿಂದ ಪೊಲೀಸರು ಸಾಮಾಜಿಕ ಬಹಿಷ್ಕಾರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದಿತು. ಹಿರಿಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುವಂತೆ ಹಾಗೂ ನವೆಂಬರ್ 8ಕ್ಕಿಂತ ಮುನ್ನ ನ್ಯಾಯಾಲಯದ ಮುಂದೆ ಹಾಜರಾಗಿ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸೂಚಿಸಿ ಎಂದು ಪೀಠ ಹರ್ಯಾಣ ಸರಕಾರದ ವಕೀಲರಿಗೆ ತಿಳಿಸಿತು.

 ಹಿಸಾರ್ ಜಿಲ್ಲೆಯ ಗ್ರಾಮವೊಂದರಲ್ಲಿ ದಲಿತ ಸಮುದಾಯದ ಸದಸ್ಯರಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದು. 2017 ಜುಲೈಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು. ಕೈಪಂಪಿನಿಂದ ನೀರು ಎತ್ತಿದ ಕಾರಣಕ್ಕಾಗಿ ಪ್ರಬಲ ಸಮುದಾಯದ ಸದಸ್ಯರು ದಲಿತ ಬಾಲಕರಿಗೆ ಥಳಿಸಿದ ಬಳಿಕ ಈ ವಿವಾದ ಆರಂಭವಾಗಿತ್ತು. ಪ್ರಬಲ ಸಮುದಾಯದ  ಸದಸ್ಯರ ಹಲ್ಲೆಯಿಂದ ಗಾಯಗೊಂಡ 6 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ಬಗ್ಗೆ ಪ್ರಥಮ ಮಾಹಿತಿ ವರದಿ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News