ಕಾಂಗ್ರೆಸ್ ಪ್ರತಿಭಟನೆ ರಾಜಕೀಯ ಪ್ರೇರಿತ : ಸಂದೀಪ್ ರಾವ್ ಆರೋಪ

Update: 2019-11-06 16:23 GMT

ಕಾಪು: ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು ಗ್ರಾಮದ ಐಎಸ್‌ಪಿಆರ್‌ಎಲ್ ಘಟಕದ 1ನೇ ಹಂತದ ಯೋಜನೆಯಲ್ಲಿ ಸಂತ್ರಸ್ತರಾದ ಜನರಿಗೆ ಪರಿಹಾರ ಮತ್ತು 2ನೇ ಹಂತದ ಯೋಜನೆಯಲ್ಲಿ ನಿರ್ವಸತಿಗರಿಗೆ ನ್ಯಾಯವನ್ನು ಒದಗಿಸಲು ಒತ್ತಾಯಿಸಿ ಸೋಮವಾರ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಐಎಸ್‌ಪಿಆರ್‌ಎಲ್ ಕಚೇರಿ ಮುಂಭಾಗದವರೆಗೆ ಪ್ರತಿಭಟನೆ ನಡೆಸಿರುವುದು ರಾಜಕೀಯ ಪ್ರೇರಿತವಾಗಿದೆ  ಎಂದು ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಂದೀಪ್ ರಾವ್ ಹೇಳಿದರು.

ಬುಧವಾರ ಕಾಪು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 2008-09ರಿಂದ 2019ರ ತನಕ ಐಎಸ್‌ಪಿಆರ್‌ಎಲ್ ಯೋಜನೆಯಿಂದ ಜನರಿಗೆ  ಎಲ್ಲಾ ರೀತಿಯ ಸಮಸ್ಯೆಗಳಿಗೆ ಮಜೂರು ಗ್ರಾಮ ಪಂಚಾಯತ್ ಸದಸ್ಯರು, ತಾಲ್ಲೂಕು ಪಂಚಾಯತ್ ಸದಸ್ಯರು, ಜಿಲ್ಲಾ ಪಂಚಾಯತ್ ಸದಸ್ಯರು ಮತ್ತು ಜನಜಾಗೃತಿ ಸಮಿತಿ ಪಕ್ಷಾತೀತವಾಗಿ ಶಾಸಕರು ಹಾಗೂ ಸಂಸದರನ್ನು ಒಗ್ಗೂಡಿಸಿಕೊಂಡು ರಾಜಕೀಯರಹಿತ ಹೋರಾಟವನ್ನು ನಡೆಸಿಕೊಂಡು ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಕೊಂಡಿದ್ದೇವೆ. 

ಮಾಜಿ ಸಚಿವ ವಿನಯಕುಮಾರ್ ಸೊರಕೆ ಶಾಸಕರಾಗಿದ್ದ ಸಂದರ್ಭದಲ್ಲಿ 2017ಕ್ಕೆ ಬಂಡೆ ಸ್ಫೋಟಕ್ಕೆ ಹಾನಿಗೊಳಗಾದ ಸಂತ್ರಸ್ತರ ಪಟ್ಟಿಯನ್ನು ಕಂದಾಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ತಯಾರಿಸಿ ನೀಡಲಾಗಿತ್ತು. ಬಳಿಕ ಒಂದೂವರೆ ವರ್ಷ ಕಾಲ ಅವರು ಶಾಸಕರು ಮತ್ತು ಅವರದ್ದೇ ಸರ್ಕಾರ ಇದ್ದರೂ ಕೂಡ ಸಂತ್ರಸ್ತರಿಗೆ ಯಾವುದೇ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ. ಈಗಿನ ಶಾಸಕರಾದ ಲಾಲಾಜಿ ಆರ್ ಮೆಂಡನ್ ಮತ್ತು ಸಂಸದರಾದ ಶೋಭ ಕರಂದ್ಲಾಜೆಯವರು ಎರಡೆರಡು ಬಾರಿ ಸಂತ್ರಸ್ತರ ಬಳಿಗೆ ಬಂದು ಅಹವಾಲು ಸ್ವೀಕರಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಕಂಪನಿಯ ಉನ್ನತ ಅಧಿಕಾರಿಗಳನ್ನು ಕರೆಸಿ ನಿಯೋಗದೊಂದಿಗೆ ಚರ್ಚಸಿ ನ್ಯಾಯ ಒದಗಿಸಿಕೊಡುವ ಬಗ್ಗೆ ಭರವಸೆ ನೀಡಿದ್ದಾರೆ. ಆದರೂ ನಿಜವಾದ ಫಲಾನುಭವಿಗಳು ಇಲ್ಲದೆ ಬೇರೆ ಗ್ರಾಮಗಳಿಂದ ಬೆರಳಿಣಿಕೆಯಷ್ಟು ಜನರಿಗೆ ಕರೆದುಕೊಂಡು ಬಂದು  ಇಲ್ಲಸಲ್ಲದ ಆರೋಪಗಳನ್ನು ಮಾಡಿ ಜನರನ್ನು ಮೋಸಮಾಡುವ ಪ್ರಯತ್ನಿಸಿರುವುದು ಖಂಡನಾರ್ಹ. 
ಪಾದೂರು ಐ.ಎಸ್.ಪಿ.ಆರ್.ಎಲ್ ಯೋಜನೆಯ ಸಂತ್ರಸ್ತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ನಮ್ಮ ಸ್ಥಳೀಯ ಜನಪ್ರತಿನಿಧಿಗಳ ಬಗ್ಗೆ ಹಾಗೂ ಜನಜಾಗೃತಿ ಸಮಿತಿಯ ಬಗ್ಗೆ ನಂಬಿಕೆ ಇರುವುದರಿಂದ ನಿನ್ನೆಯ ರಾಜಕೀಯ ಪ್ರೇರಿತ ಪ್ರತಿಭಟನೆಯಲ್ಲಿ ಭಾಗವಹಿಸದೆ ನಮಗೆ ನೈತಿಕ ಸ್ಥೈರ್ಯವನ್ನು ತುಂಬಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ರಾಜಕೀಯ ಇತ್ತಡ ಹಾಗೂ ಅಮಿಷಗಳಿಗೆ ಒಳಗಾಗದೆ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪೆಟ್ರೋಲಿಯಂ ಸಚಿವರಾದ ಧಮೇಂದ್ರ ಪ್ರಧಾನ್‌ರನ್ನು ಭೇಟಿಯಾಗಿ ಹಾಗೂ ರಾಜ್ಯದ ಕಂದಾಯ ಸಚಿವ ಆರ್. ಅಶೋಕ್‌ರನ್ನು ಭೇಟಿಯಾಗಿ ಎಲ್ಲಾ ಸಮಸ್ಯೆಯನ್ನು ಅವರಿಗೆ ವಿವರಿಸಿ ಜನರಿಗೆ ನ್ಯಾಯ ಒದಗಿಸಿಕೊಡುವಲ್ಲಿ ನಮ್ಮ ಪ್ರಯತ್ನ ನಿರಂತರವಾಗಿರುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶಿಲ್ಪಾ ಜಿ. ಸುವರ್ಣ, ತಾಲ್ಲೂಕು ಪಂಚಾಯತ್ ಸದಸ್ಯೆ, ಶಶಿಪ್ರಭಾ ಶೆಟ್ಟಿ, ಮಜೂರು ಪಂಚಾಯತ್ ಸದಸ್ಯೆ ಸಹನಾ ತಂತ್ರಿ, ಮಾಜಿ ಅಧ್ಯಕ್ಷ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News