ಕವನ ರಚನೆಗಾಗಿ ಕೃತಿಚೌರ್ಯ ತಪ್ಪಲ್ಲ : ಜಲೀಲ್‌ ಮುಕ್ರಿ

Update: 2019-11-06 16:59 GMT

ಪುತ್ತೂರು: ಕವನ ರಚನೆಗಾಗಿ ಕೃತಿಚೌರ್ಯ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅದನ್ನೇ ಬಟ್ಟಿಳಿಸುವುದು ಸರಿಯಲ್ಲ. ಅದನ್ನು ಮೂಲವಾಗಿಟ್ಟು ಸ್ವ ಚಿಂತನೆಯೊಂದಿಗೆ ತಮ್ಮದೇ ಆದ ರೀತಿಯಲ್ಲಿ ಕವನ ರಚನೆ ಮಾಡಿ ಕವಿಗೋಷ್ಠಿಗಳಲ್ಲಿ ವಾಚಿಸುವ ಕೆಲಸ ಮಾಡಬಹುದು ಎಂದು ಬಹುಭಾಷ ಕವಿ ಜಲೀಲ್ ಮುಕ್ರಿ ಉಪ್ಪಿನಂಗಡಿ ಹೇಳಿದರು. 

ಅವರು ಪುತ್ತೂರಿನ ಪರ್ಲಡ್ಕದಲ್ಲಿರುವ ಡಾ.ಶಿವರಾಮ ಕಾರಂತ ಬಾಲವನದಲ್ಲಿ `ಪೆನ್ ಪಾಯಿಂಟ್' ವಾಟ್ಸ್ಯಾಪ್ ಬಳಗದ ವತಿಯಿಂದ ಬುಧವಾರ ನಡೆದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕವನದಲ್ಲಿ ಕಠಿಣ ಪದಗಳನ್ನು ಬಳಸದೆ ಸರಳ ಪದಗಳನ್ನು ಬಳಸಿದರೆ ಅದು ಹೆಚ್ಚು ಜನರ ಮನಮಟ್ಟಲು ಸಾಧ್ಯವಾಗುತ್ತದೆ ಎಂದ ಅವರು, ಕವಿಗೋಷ್ಠಿಯಲ್ಲಿ ಮೊಬೈಲ್ ಬಳಸಿಕೊಂಡು ಕವನ ವಾಚಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಅದು ಕವಿಗೋಷ್ಠಿಯ ಮರ್ಯಾದೆಯೂ ಅಲ್ಲ. ಈ ಬೆಳವಣಿಗೆಯನ್ನು ತಡೆಯಬೇಕು ಎಂದರು.

'ರೆಕ್ಕೆ ಮುರಿದ ಹಕ್ಕಿ' ಎಂಬ ಶೀರ್ಷಿಕೆಯ `ಸೌಹಾರ್ದತೆಯ ಕವಿತೆ ಬರೆಯುವ ಹಂಬಲ, ಪದಗಳು ಸಿಗುತ್ತಿಲ್ಲ, ಲೇಖನಿ ಚಲಿಸುತ್ತಿಲ್ಲ, ನನ್ನದೊಂದು ಜಾತಿ-ನಿನ್ನದೊಂದು ಜಾತಿ...." ಎಂಬ ಆರಂಭಿಕ ಸಾಲಿನ ತಮ್ಮ ಕವನ ವಾಚನದಲ್ಲಿ ಅವರು, ಬೇಲಿಯೇ ಹೊಲವ ಮೇಯುವ, ತಂದೆಯೇ ಅತ್ಯಾಚಾರ ನಡೆಸುವ, ಹತ್ತಿದ ಏಣಿಯನ್ನು ತುಳಿಯುವ, ಬೆಳೆದ ಊರು ಮರೆಯುವ, ಕುರ್ಚಿಗಾಗಿ ದೇವರ ಹೆಸರಿನಲ್ಲಿ ಧರ್ಮದ ಬೆಂಕಿಯಲ್ಲಿ ಸುಡುವ ಪ್ರಸ್ತುತ ಕಾಲಘಟ್ಟದಲ್ಲಿ ಜಾತಿ ಧರ್ಮಗಳ ನಡುವೆ ನಡೆಯುವ ಕೋಮುದ್ವೇಷ, ರಕ್ತಪಾತ, ಸಾವು ನೋವುಗಳನ್ನು ಕಟ್ಟಿಕೊಡುವ ಮೂಲಕ ಧರ್ಮದ ನೆಲೆಯೂ ಒಂದೇ, ಮೂಲವೂ ಒಂದೇ ಎಂದು ಸಂದೇಶ ಸಾರುವ ಪ್ರಯತ್ನ ನಡೆಸಿದರು. 

ಕವಿಗಳಾದ ಕೃಷ್ಣಪ್ಪ ಬಂಬಿಲ, ಅಸಪ ಗೇರುಕಟ್ಟೆ, ತಾಜ್ ಪುತ್ತೂರು, ಅಶ್ರಫ್ ಸವಣೂರು, ನಿಝಾಮ್ ಮಂಚಿ,ಅಫ್ನಾಶ್ಫೀ ಕರಾಯ, ಸಲೀಂ ಮಾಣಿ, ಸಾಹುಕಾರ್ ಅಚ್ಚು, ಲುಕ್ಕಾನ್ ಅಡ್ಯಾರ್, ಇಬ್ರಾಹಿಂ ಖಲೀಲ್, ಗಣೇಶ್ ಅದ್ಯಪಾಡಿ, ನಲ್ಮಿಡಿ ಚಾರ್ಮಾಡಿ, ನಾರಾಯಣ ಕುಂಬ್ರ,ಹಸನ್ಮುಖಿ ಬಡಗನ್ನೂರು, ಕಶಿಖ ಬಜ್ಪೆ, ಅಬ್ದುಲ್ ಗಫ್ಫಾರ್ ಕೆಮ್ಮಾರ, ಬಾಪು ಅಮ್ಮೆಂಬಳ, ಅನ್ಸಾರ್ ಶಾಝ್, ನಾಸಿರ್ ಸಜಿಪ, ವಿಶ್ವನಾಥ ಎನ್.ನೇರಳಕಟ್ಟೆ ಶಹದ್ ಸಜೀಪನಡು ಅವರು ಕವನ ವಾಚಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಅನ್ಸಾರ್ ಕಾಟಿಪಳ್ಳ, ಇಸಾಕ್ ವಿಟ್ಲ ಉಪಸ್ಥಿತರಿದ್ದರು. ಸಫ್ವಾನ್ ಸವಣೂರು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News