×
Ad

ಪಾಕಿಸ್ತಾನಕ್ಕೆ ರಹಸ್ಯ ಕಾರ್ಯಸೂಚಿ ಇದೆ: ಕರ್ತಾರ್ಪುರ ವೀಡಿಯೊದ ಕುರಿತು ಅಮರಿಂದರ್ ಸಿಂಗ್ ಪ್ರತಿಕ್ರಿಯೆ

Update: 2019-11-06 22:06 IST

ಹೊಸದಿಲ್ಲಿ, ನ. 6: ಕರ್ತಾರ್ಪುರ ಕಾರಿಡಾರ್ ಆರಂಭಿಸುವಲ್ಲಿ ಪಾಕಿಸ್ತಾನದ ರಹಸ್ಯ ಕಾರ್ಯಸೂಚಿ ಇದೆ ಎಂದು ಪಂಜಾಬ್ ಮುಖ್ಯಮಂತ್ರಿ ಅವರಿಂದರ್ ಸಿಂಗ್ ಬುಧವಾರ ಹೇಳಿದ್ದಾರೆ. ಕರ್ತಾರ್ಪುರ ಕಾರಿಡರ್ ಆರಂಭದ ಹಿನ್ನೆಲೆಯಲ್ಲಿ ಸಿಕ್ಖ್ ಯಾತ್ರಿಗಳ ಹಿಂದೆ ಖಲಿಸ್ತಾನದ ಪ್ರತ್ಯೇಕತಾವಾದಿಗಳ ಪೋಸ್ಟರ್ ಇರುವ ವೀಡಿಯೊವನ್ನು ಪಾಕಿಸ್ತಾನ ಸೋಮವಾರ ಬಿಡುಗಡೆ ಮಾಡಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

“ಪಾಕಿಸ್ತಾನದ ರಹಸ್ಯ ಕಾರ್ಯಸೂಚಿ ಬಗ್ಗೆ ನಾನು ಯೋಜನೆಯ ಆರಂಭದ ದಿನದಿಂದಲೇ ಎಚ್ಚರಿಕೆ ನೀಡುತ್ತಾ ಬಂದಿದ್ದೇನೆ” ಎಂದು ಅವರು ಹೇಳಿದ್ದಾರೆ. ಒಂದೆಡೆ ಅವರು (ಪಾಕಿಸ್ತಾನ) ಪ್ರೀತಿ ತೋರಿಸುತ್ತಿದ್ದಾರೆ. ಇನ್ನೊಂದೆಡೆ ಸಮಸ್ಯೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ನಾವು ತುಂಬಾ ಜಾಗರೂಕರಾಗಿರಬೇಕು ಎಂದು ಅವರು ತಿಳಿಸಿದ್ದಾರೆ.

 ಕರ್ತಾಪುರ್ರ ಕಾರಿಡರ್ ಉದ್ಘಾಟನೆಗಿಂತ ಮುನ್ನ ಪಾಕಿಸ್ತಾನದ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ನಾಲ್ಕು ನಿಮಿಷಗಳ ಈ ವೀಡಿಯೊ ಬಿಡುಗಡೆ ಮಾಡಿದೆ. ಈ ವೀಡಿಯೊದಲ್ಲಿ ಪಾಕಿಸ್ತಾನದಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಿದ ಸಿಕ್ಖ್ ಯಾತ್ರಿಗಳ ಹಿನ್ನೆಲೆಯಲ್ಲಿ ಖಲಿಸ್ತಾನ ಪ್ರತ್ಯೇಕತಾವಾದಿಗಳಾದ ಭಿಂದ್ರನ್‌ವಾಲೆ, ಮೇಜರ್ ಜನರಲ್ ಶಬೇಗ್ ಸಿಂಗ್ ಹಾಗೂ ಆಮ್ರಿಕ್ ಸಿಂಗ್ ಖಾಲ್ಸಾ ಅವರ ಪೋಸ್ಟರ್ ಇದೆ. ಅಮರಿಂದರ್ ಸಿಂಗ್ ಪಾಕಿಸ್ತಾನದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ರಾಜ್ಯದಲ್ಲಿ ಸಿಕ್ಖ್ ಭಯೋತ್ಪಾದನೆ ಪುನರುಜ್ಜೀವನಗೊಳಿಸಲು ಕರ್ತಾರ್ಪುರ ಕಾರಿಡರ್ ಅನ್ನು ಪಾಕಿಸ್ತಾನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಈ ಹಿಂದೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News