ಸಿಖ್ ವಿರೋಧಿ ಗಲಭೆ ಪ್ರಕರಣ: ಸಜ್ಜನ್ ಕುಮಾರ್ ಆರೋಗ್ಯ ಸ್ಥಿತಿ ಪರಿಶೀಲನೆಗೆ ಸುಪ್ರೀಂ ನಿರ್ದೇಶ

Update: 2019-11-06 16:38 GMT

ಹೊಸದಿಲ್ಲಿ, ನ. 6: ಏಮ್ಸ್‌ನ ವೈದ್ಯರ ಸಮಿತಿಯಿಂದ ಆರೋಗ್ಯ ಪರಿಶೀಲನೆ ನಡೆಸುವಂತೆ 1984ರ ಸಿಖ್ ವಿರೋಧಿ ಗಲಭೆ ಪ್ರಕರಣದಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಕಾಂಗ್ರೆಸ್‌ನ ಮಾಜಿ ನಾಯಕ ಸಜ್ಜನ್ ಕುಮಾರ್‌ಗೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.

 ಆರೋಗ್ಯದ ನೆಲೆಯಲ್ಲಿ ತನ್ನ ಜಾಮೀನು ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸುವಂತೆ ಸಜ್ಜನ್ ಕುಮಾರ್ ಕೋರಿದ ಬಳಿಕ ನಾಲ್ಕು ವಾರಗಳಲ್ಲಿ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಏಮ್ಸ್ ನಿರ್ದೇಶಕರು ರೂಪಿಸಿದ ವೈದ್ಯರ ಸಮಿತಿಗೆ ಸೂಚಿಸಿದೆ.

ಮುಂದಿನ ವರ್ಷ ಬೇಸಗೆ ರಜೆಯಲ್ಲಿ ಸಜ್ಜನ್ ಕುಮಾರ್ ಅವರ ಜಾಮೀನು ಅರ್ಜಿಯ ಆಲಿಕೆ ನಡೆಸಲಾಗುವುದು ಎಂದು ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಪೀಠ ಹೇಳಿದೆ. ಸಿಕ್ಖ್ ಗಲಭೆ ಪ್ರಕರಣ ಸಾಮಾನ್ಯ ಪ್ರಕರಣ ಅಲ್ಲ. ಅಲ್ಲದೆ, ಈ ಪ್ರಕರಣದ ಬಗ್ಗೆ ಯಾವುದೇ ಆದೇಶ ನೀಡುವ ಮೊದಲು ವಿಸ್ತೃತ ಆಲಿಕೆ ಅಗತ್ಯ. ಆದುದರಿಂದ ಸಜ್ಜನ್ ಕುಮಾರ್ ಜಾಮೀನು ಅರ್ಜಿಯನ್ನು 2020 ಮೇಯಲ್ಲಿ ಆಲಿಕೆ ನಡೆಸಲಾಗುವುದು ಎಂದು ನ್ಯಾಯಮೂರ್ತಿ ಬೊಬ್ಡೆ ನೇತೃತ್ವದ ಪೀಠ ಆಗಸ್ಟ್ 5ರಂದು ಹೇಳಿತ್ತು. ‘‘ಏಮ್ಸ್ ನಿರ್ದೇಶಕ ರೂಪಿಸಿದ ವೈದ್ಯರ ಸಮಿತಿಯ ಮೂಲಕ ಸಜ್ಜನ್ ಕುಮಾರ್‌ನ ಆರೋಗ್ಯ ಸ್ಥಿತಿಯ ಪರಿಶೀಲನೆ ನಡೆಸಿ ನಾಲ್ಕು ವಾರಗಳಲ್ಲಿ ವರದಿ ನೀಡಬೇಕೆನ್ನುವುದು ನಮ್ಮ ನಿಲುವು’’ ಎಂದು ಪೀಠ ತಿಳಿಸಿದೆ.

ಸಜ್ಜನ್ ಕುಮಾರ್ ಪರವಾಗಿ ಹಾಜರಾದ ಹಿರಿಯ ವಕೀಲ ವಿಕಾಸ್ ಸಿಂಗ್, ನನ್ನ ಕಕ್ಷಿಗಾರ ಕಳೆದ 11 ತಿಂಗಳಿಂದ ಜೈಲಿನಲ್ಲಿದಾನೆ. ಆತನ ತೂಕ 8ರಿಂದ 10 ಕಿ.ಗ್ರಾಂ. ಇಳಿಕೆಯಾಗಿದೆ. ಆತ ವಿವಿಧ ಖಾಯಿಲೆ ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅವರು ತಿಳಿಸಿದರು. ಇದಕ್ಕೆ ಪೀಠ, ತೂಕ ಕಳೆದುಕೊಳ್ಳವುದೆಂದರೆ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂಬುದು ಅರ್ಥವಲ್ಲ. ಆದರೆ, ಈಗ ನಾವು ಸಜ್ಜನ್ ಕುಮಾರ್ ಆರೋಗ್ಯ ಸ್ಥಿತಿ ಪರಿಶೀಲಿಸಲು ಆದೇಶ ನೀಡಿದ್ದೇವೆ ಎಂದು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News