ಸ್ನೇಹಿತೆಯೊಂದಿಗೆ ಮಾತನಾಡುತ್ತಿದ್ದ ಯುವಕರಿಗೆ ತಂಡದಿಂದ ಹಲ್ಲೆ
ಉಡುಪಿ, ನ.6: ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ಗೆಳೆತಿಯೊಂದಿಗೆ ಮಾತನಾಡುತ್ತಿದ್ದ ಯುವಕರ ಮೇಲೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸ್ನೇಹಿತರಾದ ಆಶೀಸ್, ಶಾನು, ತಾಹಿಮ್ ಮತ್ತು ಶಿವಾನಿ ಎಂಬವರು ನ.2 ರಂದು ರಾತ್ರಿ 8 ಗಂಟೆ ಸುಮಾರಿಗೆ ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ಕುಳಿತು ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ಸುನಿಲ್ ಪೂಜಾರಿ, ರಾಕೇಶ್ ಸುಮರ್ಣ ಮತ್ತು ಇತರರು, ಇವರ ಗುರುತು ಚೀಟಿ ಕೇಳಿ ಏಕಾಏಕಿ ಆಶೀಸ್ ಮತ್ತು ಇತರರ ಮೇಲೆ ದೈಹಿಕ ಹಲ್ಲೆ ನಡೆಸಿದ್ದರು.
ಈ ಕುರಿತು ಮಾಹಿತಿ ತಿಳಿದ ತಕ್ಷಣ ಇವರನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಶಿವಾನಿಯ ತಂದೆಯ ಮನವಿಯಂತೆ ದೂರು ನೀಡದೆ ತಮ್ಮ ಹೇಳಿಕೆಯನ್ನು ನೀಡಿ ಹೋಗಿ ದ್ದಾರೆ. ಶಿವಾನಿ ನೀಡಿದ ಲಿಖಿತ ಹೇಳಿಕೆಯಲ್ಲಿ ತನ್ನ ಸ್ನೇಹಿತರೊಂದಿಗೆ ಪಾರ್ಕಿ ನಲ್ಲಿ ಕುಳಿತು ಮಾತನಾಡುತ್ತಿರುವಾಗ 8-9 ಮಂದಿ ಬಂದು ಏಕಾಏಕಿ ಸ್ನೇಹಿತ ರಿಗೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಆಕೆಯ ಜೊತೆಯಲ್ಲಿದ್ದ ಸ್ನೇಹಿತರು ಅಸಭ್ಯ ರೀತಿಯಲ್ಲಿ ವರ್ತಿಸಿದ್ದಾರೆ ಎಂಬುದನ್ನು ಆಕೆ ತನ್ನ ಹೇಳಿಕೆ ಯಲ್ಲಿ ನಮೂದಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನ.4ರಂದು ಅಶೀಸ್ ಮತ್ತು ಶಿವಾನಿಯ ಭಾವಚಿತ್ರಗಳನ್ನು ಫೇಸ್‌ಬುಕ್ ನಿಂದ ಡೌನ್‌ಲೋಡ್ ಮಾಡಿ ವಾಟ್ಸಾಪ್‌ನಲ್ಲಿ ಹಾಕಿರುವುದರಿಂದ ಮತ್ತು ಸ್ನೇಹಿತರೊಂದಿಗೆ ಪಾರ್ಕಿನಲ್ಲಿ ಮಾತಾನಾಡುತ್ತಿರುವಾಗ ಏಕಾಏಕಿ ದೈಹಿಕ ಹಲ್ಲೆ ನಡೆಸಿದ್ದಲ್ಲದೇ ಅವರ ಭಾವಚಿತ್ರಗಳನ್ನು ತೆಗೆದ ಕುರಿತು ನ.5ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.
ಪ್ರತಿದೂರು: ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೃಷ್ಣಾನಂದ ಎಂಬವರು ಪ್ರತಿ ದೂರು ನೀಡಿದ್ದು, ಅದರಂತೆ ಅ.2ರಂದು ರಾತ್ರಿ 8ಗಂಟೆಗೆ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಆಶೀಸ್ ಆಲಿ ಎಂಬಾತ ಶಿವಾನಿ ಎಂಬ ಹುಡುಗಿ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ವೇಳೆ ಪ್ರಶ್ನಿಸಿದ್ದು, ಆಗ ಆಶೀಸ್, ಹರ್ಷದ್ ಅಲಿ ಮತ್ತು ಇತರ 2-3 ಜನರನ್ನು ಕರೆಸಿ ಅವಾಚ್ಯವಾಗಿ ಬೈದು ದೈಹಿಕ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವುದಾಗಿ ದೂರಲಾಗಿದೆ. ಅದರಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಚೋದನಾಕಾರಿ ವರದಿ ವಿರುದ್ಧ ಕ್ರಮ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಇವರ ಭಾವಚಿತ್ರಗಳನ್ನು ಮತ್ತು ಸ್ಥಳೀಯ ವಾಹಿನಿಯಲ್ಲಿ ಅಸಮರ್ಪಕ ಮಾಹಿತಿಯನ್ನು ಪ್ರಸರಿಸಿರುವುದು ಕಂಡು ಬಂದಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರಗಿಸ ಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಇಂತಹ ಪ್ರಚೋದನಕಾರಿ ಅಸಮರ್ಪಕ ಮಾಹಿತಿಯನ್ನು ಪ್ರಸರಿಸಿರುವುದು ಮತ್ತು ಭಾವಚಿತ್ರಗಳನ್ನು ವಾಟ್ಸಾಪ್ ಮೂಲಕ ಕಳುಹಿಸುವುದು ಕಾನೂನು ಸುವ್ಯವಸ್ಥೆಗೆ ಮತ್ತು ಶಾಂತಿ ಭಂಗವಾಗಲು ಕಾರಣವಾಗುವುದರಿಂದ ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಇಂತಹ ಪ್ರಚೋದನಾಕಾರಿ, ಅಸಮರ್ಪಕ ಮಾಹಿತಿಯ ವರದಿಗಳನ್ನು ಸಾಮಾಜಿಕ ಜಾಲತಾಣಗಳಾಗಲೀ, ಸ್ಥಳೀಯ ವಾಹಿನಿಯಲ್ಲಿ ಪ್ರಸರಿಸಬಾರದೆಂದು ಇಲಾಖೆ ಸೂಚಿಸಿದೆ.