ಸ್ಪೋಟಕ ಬಳಸಿ ಮೀನು ಹಿಡಿಯುವ ವೇಳೆ ಯುವಕ ಸಂಶಯಾಸ್ಪದವಾಗಿ ಮೃತ್ಯು: ದೂರು

Update: 2019-11-06 16:52 GMT

ಬ್ರಹ್ಮಾವರ, ನ.6: ಹೊಳೆಗೆ ತೋಟೆ(ಸ್ಪೋಟಕ) ಹಾಕಿ ಮೀನು ಹಿಡಿಯುವ ವೇಳೆ ಯುವಕನೋರ್ವ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ನ.5ರಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಹೊಸೂರು ಗ್ರಾಮದ ಹರಾವು ಎಂಬಲ್ಲಿ ನಡೆದಿದೆ.

ಮೃತರನ್ನು ಹೊಸೂರು ಗ್ರಾಮದ ಕುರ್ಪಾಡಿಯ ಸುರೇಶ್ ಸೇರ್ವೆಗಾರ್ ಎಂಬವರ ಮಗ ಶ್ರೇಯಸ್(19) ಎಂದು ಗುರುತಿಸಲಾಗಿದೆ. ಇವರು ತನ್ನ ಸ್ನೇಹಿತ ರಾಕೇಶ್ ಎಂಬವರೊಂದಿಗೆ ಮಡಿಸಾಲು ಹೊಳೆಯ ಬಳಿ ಬೈಕ್‌ನಲ್ಲಿ ಹೋಗಿದ್ದು, ಅಲ್ಲಿಗೆ ರಾಕೇಶ್ ಸ್ನೇಹಿತರಾದ ಯೋಗೀಶ್ ಹಾಗೂ ಸದಾನಂದ ಎಂಬವರು ಬಂದಿದ್ದರು.

ಇವರೆಲ್ಲ ಒಟ್ಟಾಗಿ ಮೀನು ಹಿಡಿಯಲು ಮಡಿಸಾಲು ಹೊಳೆಗೆ ತೋಟೆ ಹಾಕಿದ್ದು, ಮಧ್ಯಾಹ್ನ 2 ಗಂಟೆ ಸುಮಾರಿಗೆ ತೋಟೆ ಸ್ಪೋಟಗೊಂಡಿತ್ತು. ಈ ವೇಳೆ ಶ್ರೇಯಸ್ ಮೃತಪಟ್ಟಿದ್ದು, ಶ್ರೇಯಸ್ ಮರಣದ ಬಗ್ಗೆ ಮನೆಯವರು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಈ ಸಾವು ಸ್ಪೋಟದಿಂದ ಸಂಭವಿಸಿರಬಹುದೆಂದು ಮೃತರ ಮನೆಯವರು ಆತನ ಗೆಳೆಯರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಅದರಂತೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News