ಅಡಿಕೆ ಕೊಳೆರೋಗದ ಸಂತ್ರಸ್ಥ ರೈತರಿಗೆ ಪರಿಹಾರ ಭಾಕಿಸಂನಿಂದ ತಹಶೀಲ್ದಾರ್‌ಗೆ ಮನವಿ

Update: 2019-11-06 16:56 GMT

ಕುಂದಾಪುರ, ನ.6: ಈ ವರ್ಷದ ಅತಿಯಾದ ಮಳೆಯಿಂದ ಅಡಿಕೆ ತೋಟ ಗಳಲ್ಲಿ ವಿಪರೀತ ಕೊಳೆ (ಮಹಾಳಿ) ರೋಗ ಬಂದು ಫಸಲಿನಲ್ಲಿ ಅರ್ಧಾಂಶಕ್ಕೂ ಹೆಚ್ಚು ನಷ್ಟವಾಗಿದೆ. ಹೀಗಾಗಿ ರೈತರಿಗಾದ ನಷ್ಟವನ್ನು ಸರಕಾರ ಜಿಲ್ಲಾಡಳಿತದ ಮೂಲಕ ಭರಿಸಿಕೊಡಬೇಕೆಂದು ಆಗ್ರಹಿಸುವ ಮನವಿಯನ್ನು ಭಾರತೀಯ ಕಿಸಾನ್ ಸಂಘ ಕುಂದಾಪುರ ತಾಲೂಕು ಸಮಿತಿ ಕುಂದಾಪುರದ ತಹಶೀಲ್ದಾರ್‌ಗೆ ಅರ್ಪಿಸಿತು.

ಕೊಳೆ ರೋಗದಿಂದಾಗಿ ಎಳೆ ಅಡಿಕೆಗಳೆಲ್ಲಾ ಉದುರಿ ಮರದ ಬುಡದಲ್ಲಿ ರಾಶಿ ಬಿದ್ದಿವೆ. ನಾಲ್ಕೈದು ಬಾರಿ ಬೋರ್ಡೊ ದ್ರಾವಣ ಸಿಂಪಡಣೆ ಮಾಡಿಯೂ ಫಸಲನ್ನು ಉಳಿಸಿಕೊಳ್ಳಲಾಗದೆ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಧಾರಣೆಯಿದ್ದಾಗ ಫಸಲು ಇಲ್ಲದೆ ರೈತನು ಆರ್ಥಿಕವಾಗಿ ರೈತನು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಸಂಘದ ತಾಲೂಕು ಅಧ್ಯಕ್ಷರಾದ ಸೀತಾರಾಮ ಗಾಣಿಗ ನೇತೃತ್ವದ ನಿಯೋಗ ಕುಂದಾಪುರ ತಾಲೂಕು ತಹಶೀಲ್ದಾರ್ ತಿಪ್ಪೇಸ್ವಾಮಿ ಅವರನ್ನು ಮಂಗಳವಾರ ಇಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.

ಸಂಘದ ಮನವಿಯೊಂದಿಗೆ ತಾಲೂಕಿನ ವ್ಯಾಪ್ತಿಯ 185 ರೈತರು ಸಂಘಕ್ಕೆ ಸಲ್ಲಿಸಿದ ಅಡಿಕೆ ಕೊಳೆರೋಗಕ್ಕೆ ಪರಿಹಾರದ ಅರ್ಜಿಯನ್ನು ತಹಶೀಲ್ದಾರರಿಗೆ ಸಲ್ಲಿಸಲಾಯಿತು. ಅರ್ಜಿಯನ್ನು ಸ್ವೀಕರಿಸಿದ ತಹಶೀಲ್ದಾರರು ಸರಕಾರದಿಂದ ಈ ಬಗ್ಗೆ ಸೂಕ್ತ ಆದೇಶ ಬಂದ ನಂತರ ಪರಿಹಾರ ಮಾರ್ಗಸೂಚಿ ಅನುಸಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ನಿಯೋಗದಲ್ಲಿ ತಾಲೂಕು ಉಪಾಧ್ಯಕ್ಷ ವೆಂಕಟೇಶ್ ರಾವ್, ಪದಾಧಿಕಾರಿ ಗಳಾದ ಚಂದ್ರಶೇಖರ ಉಡುಪ, ಶಂಕರನಾರಾಯಣ ಭಟ್, ಅನಂತಪದ್ಮನಾಭ ಉಡುಪ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News