ಸಂಘರ್ಷ ನಿವಾರಿಸಲು ಕರ್ತಾರ್‌ ಪುರ ಮಾದರಿ ಪ್ರೇರಣೆ: ಮನಮೋಹನ್ ಸಿಂಗ್ ಆಶಯ

Update: 2019-11-06 17:09 GMT

ಚಂಡೀಗಢ, ನ.6: ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೇ ಸಂಘರ್ಷ, ಬಿಕ್ಕಟ್ಟನ್ನು ನಿವಾರಿಸಲು ಕರ್ತಾರ್‌ ಪುರ ಮಾದರಿ ನೆರವಾಗಬಹುದು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಶಿಸಿದ್ದಾರೆ.

ಶಾಂತಿ ಮತ್ತು ಸೌಹಾರ್ದತೆಯಿಂದ ಮಾತ್ರ ಪ್ರವರ್ಧಮಾನ ಭವಿಷ್ಯವನ್ನು ಖಚಿತಪಡಿಸಬಹುದು. ಸುದೀರ್ಘಾವಧಿಯಿಂದ ನನೆಗುದಿಗೆ ಬಿದ್ದಿರುವ ಬಿಕ್ಕಟ್ಟುಗಳನ್ನು ಪರಿಹರಿಸಿಕೊಳ್ಳಲು ಕರ್ತಾರ್‌ಪುರ ಮಾದರಿ ನೆರವಾಗಲಿದೆ ಎಂದು ಸಿಂಗ್ ಆಶಯ ವ್ಯಕ್ತಪಡಿಸಿದರು.

ಸಿಖ್ ಧರ್ಮದ ಸ್ಥಾಪಕ ಗುರುನಾನಕ ದೇವರ 550ನೇ ಜನ್ಮದಿನಾಚರಣೆ ಸ್ಮರಣಾರ್ಥ ನಡೆದ ಪಂಜಾಬ್ ವಿಧಾನಸಭೆಯ ವಿಶೇಷ ಅಧಿವೇಶನವನ್ನುದ್ದೇಶಿಸಿ ಅವರು ಮಾತನಾಡಿದರು. ಪರಸ್ಪರ ಪ್ರೀತಿ ಮತ್ತು ಗೌರವದ ಸಂದೇಶವನ್ನು ಗುರುನಾನಕರು ನೀಡಿದ್ದರು. ಧಾರ್ಮಿಕ ಸಹಷ್ಣುತೆ ಮತ್ತು ಪ್ರೀತಿ ಮಾತ್ರ ಸಂಪ್ರದಾಯವಾದಿಗಳ ಹಿಂಸೆಯನ್ನು ನಿವಾರಿಸುವ ಧಾರಿ ತೋರಿಸಬಹುದು. ಪಂಜಾಬ್ ಗುರುನಾನಕರ ಕರ್ಮಭೂಮಿಯಾಗಿತ್ತು. ಇಂದಿನ ಯುವಜನತೆ ಮಾದಕ ದೃವ್ಯಗಳ ದಾಸರಾಗಿ ತಮ್ಮ ಬದುಕನ್ನು ವ್ಯರ್ಥಗೊಳಿಸುತ್ತಿರುವುದನ್ನು ಕಂಡಾಗ, ಮಹಿಳೆಯರನ್ನು ಗೌರವಿಸದ ಪರಿಸ್ಥಿತಿ ನೆಲೆಸಿರುವಾಗ ಗುರುನಾನಕರ ಪರಂಪರೆಯನ್ನು ಜೀವಂತವಾಗಿರಿಸಬಲ್ಲೆವೇ ಎಂಬ ಪ್ರಶ್ನೆ ಮೂಡುತ್ತದೆ ಎಂದು ಮಾಜಿ ಪ್ರಧಾನಿ ಆತಂಕ ವ್ಯಕ್ತಪಡಿಸಿದರು.

 ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಮಾತನಾಡಿ, ಗುರುನಾನಕರು ಭಾರತದ ಪ್ರಜಾಪ್ರಭುತ್ವ ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬರಾಗಿದ್ದರು. ಅವರ ಬೋಧನೆಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡರೆ ಶಾಂತಿ ಮತ್ತು ಸುಸ್ಥಿರ ಅಭಿವೃದ್ಧಿಯ ಹೊಸ ಜಗತ್ತು ರಚನೆಯಾಗಬಹುದು ಎಂದು ಹೇಳಿದ್ದಾರೆ.

ಗುರುಗಳೆಂದರೆ ತಮ್ಮ ಚಿಂತನೆ ಮತ್ತು ಒಳನೋಟದಿಂದ ಜನರ ಬದುಕನ್ನು ಉತ್ಕೃಷ್ಟಗೊಳಿಸುವವರು. ಜ್ಞಾನದ ಬೆಳಕು ತೋರಿಸಿ, ಜನರ ಮನದಲ್ಲಿರುವ ಗೊಂದಲಗಳನ್ನು ನಿವಾರಿಸಿ ಅವರಿಗೆ ದಾರಿ ತೋರುವವನು. ಇದಕ್ಕೆ ಉದಾಹರಣೆಯಂತಿದ್ದ ಗುರು ನಾನಕರ ಚಿಂತನೆ ಇಂದಿನ ದಿನಕ್ಕೂ ಪ್ರಸ್ತುತವಾಗಿದೆ ಎಂದು ನಾಯ್ಡು ಹೇಳಿದರು. ಲಿಂಗ ಸಮಾನತೆ ಮತ್ತು ಮಹಿಳೆಯರನ್ನು ಗೌರವಿಸುವುದು ಈ ಎರಡು ಪಾಠಗಳನ್ನು ಗುರು ನಾನಕರ ಬದುಕಿನಿಂದ ಕಲಿಯಬೇಕು. ಹಿಂದು ಮತ್ತು ಮುಸ್ಲಿಮರ ಮಧ್ಯೆ ಯಾವುದೇ ಭಿನ್ನತೆಯಿಲ್ಲ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಂಡಿದ್ದ ಅವರು ಯಾವುದೇ ದೇಶವೂ ವಿದೇಶವಲ್ಲ ಮತ್ತು ಯಾವ ವ್ಯಕ್ತಿಯೂ ಅನ್ಯರಲ್ಲ, ಎಲ್ಲರೂ ನಮ್ಮವರೇ ಎಂದು ಪ್ರತಿಪಾದಿಸಿದ್ದರು.

16ನೇ ಶತಮಾನದಲ್ಲೇ ಅಂತರ್ ಧರ್ಮದ ಸಂವಾದ ಆರಂಭಿಸಿದ ಮಹಾ ಗುರು ಅವರಾಗಿದ್ದರು. ಕಠಿಣ ದುಡಿಮೆಯ ಮೂಲಕ ಜೀವನೋಪಾಯ ಕಂಡುಕೊಳ್ಳಬೇಕು ಎಂಬುದನ್ನು ಅವರು ಒತ್ತಿಹೇಳಿದ್ದರು ಎಂದು ನಾಯ್ಡು ಬಣ್ಣಿಸಿದರು.

ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಮಾತನಾಡಿ, ಗುರುನಾನಕರ ಚಿಂತನೆ ಮತ್ತು ಬೋಧನೆಗಳನ್ನು ಎಲ್ಲರೂ ನಿಜಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಾಯು ಗುರು, ನೀರು ತಂದೆ, ಭೂಮಿ ನಮ್ಮ ತಾಯಿ ಎಂಬುದು ಗುರುನಾನಕರ ಚಿಂತನೆಯಾಗಿತ್ತು. ಅಂದರೆ ಪರಿಸರ ಮಾಲಿನ್ಯದ ವಿರುದ್ಧ ಅವರು ಆ ಕಾಲದಲ್ಲೇ ಎಚ್ಚರಿಕೆ ನೀಡಿದ್ದರು. ಆದರೆ ಮನುಷ್ಯರು ಅದನ್ನು ಪಾಲಿಸದ ಕಾರಣ ಈಗ ಪರಿಸರ ಮಾಲಿನ್ಯ ಸಮಸ್ಯೆ ಬೃಹದಾಕಾರಕ್ಕೆ ಬೆಳೆದಿದೆ ಎಂದರು.

ಪಂಜಾಬ್ ಮತ್ತು ಹರ್ಯಾಣದ ಎಲ್ಲಾ ಶಾಸಕರು, ಸಂಸದರು ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್, ಉಪಮುಖ್ಯಮಂತ್ರಿ ದುಷ್ಯಂತ ಚೌತಾಲ, ಪಂಜಾಬ್ ಮತ್ತು ಹರ್ಯಾಣದ ರಾಜ್ಯಪಾಲರಾದ ವಿಪಿ ಸಿಂಗ್ ಬದ್ನೋರ್ ಮತ್ತು ಸತ್ಯದೇವ್ ನಾರಾಯಣ ಆರ್ಯ ಅಧಿವೇಶನದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News