ಮುಂದಿನ ದಿನಗಳಲ್ಲಿ ಆರ್ಥಿಕ ಸುಧಾರಣೆಗೆ ಇನ್ನಷ್ಟು ಕ್ರಮ: ನಿರ್ಮಲಾ ಸುಳಿವು

Update: 2019-11-06 17:33 GMT

 ಹೊಸದಿಲ್ಲಿ,ನ.6: ಮುಂಬರುವ ದಿನಗಳಲ್ಲಿ ಇನ್ನಷ್ಟು ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯ ಬಗ್ಗೆ ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಬುಧವಾರ ಸುಳಿವು ನೀಡಿದ್ದಾರೆ.

ಹಿಂದಿನ ಅವಧಿಯಲ್ಲಿ ರಾಜ್ಯಸಭೆಯಲ್ಲಿ ಆಡಳಿತಾರೂಢ ಎನ್‌ಡಿಎ ಒಕ್ಕೂಟಕ್ಕೆ ಸಂಖ್ಯಾಬಲದ ಕೊರತೆಯಿದ್ದುದರಿಂದ ಹಲವಾರು ವಿಧೇಯಕಗಳನ್ನು ಜಾರಿಗೆ ತರಲು ಸಾಧ್ಯವಾಗದೆ ಇದ್ದುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು ಬಿಜೆಪಿ ನೇತೃತ್ವದ ಸರಕಾರವು ಕಳೆದ ಸಲ ಅವಕಾಶವನ್ನು ಕಳೆದುಕೊಂಡಿರಬಹುದು, ಆರೆ ಖಂಡಿತವಾಗಿಯೂ ಈ ಸಲ ಹಾಗಾಗಲಾರದು ಎಂದು ಅವರು ಹೇಳಿದ್ದಾರೆ.

 ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯು ಆಯೋಜಿಸಿದ್ದ ‘ಎಕ್ಸ್‌ಪ್ರೆಸ್ ಅಡ್ಡಾ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರ್ಥಿಕ ಸುಧಾರಣೆಗಳು ತ್ವರಿತವಾಗಿ ನಡೆಯವಂತೆ ಮಾಡುವ ನಿಟ್ಟಿನಲ್ಲಿ ನಮಗಿರುವ ಬದ್ಧತೆಯನ್ನು ನಾವು ಈಗ ತೋರಿಸುವುದು ಖಚಿತ. ಮೋದಿ 2.0 ಸರಕಾರಕ್ಕೆ ನೀಡಿರುವ ಜನಾದೇಶವು ಇದಕ್ಕೆ ನೆರವಾಗಲಿದೆಯೆಂದು ಅವರು ಹೇಳಿದರು.

   ಆರ್ಥಿಕ ಹಿಂಜರಿತದಿಂದಾಗಿ ಬಿಜೆಪಿಯು ಇತ್ತೀಚೆಗೆ ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ರಾಷ್ಟ್ರವಾದಿ ಭಾವನೆಗಳನ್ನು ಬಂಡವಾಳವಾಗಿ ಮಾಡಿಕೊಳ್ಳುವಲ್ಲಿ ವಿಫಲವಾಯಿತೆಂಬ ಅನಿಸಿಕೆಗಳನ್ನು ಅವರು ಅಲ್ಲಗಳೆದಿದ್ದಾರೆ. ‘‘ ಕೇಂದ್ರ ಅಥವಾ ರಾಜ್ಯ ಸರಕಾರಗಳಾಗಿರಲಿ, ಯಾವುದೇ ಸರಕಾರಕ್ಕೂ, ‘‘ ರಾಷ್ಟ್ರವಾದದ ಕುರಿತಾಗಿ ನಿಮ್ಮ ಮತವನ್ನು ನೀಡಿ ಮತ್ತು ನಾನು ಅರ್ಥಿಕ ವಿಚಾರಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ’’ ಎಂದು ಹೇಳಿಕೊಂಡು ಮತ ಯಾಚಿಸಲು ಸಾಧ್ಯವಿಲ್ಲ ಎಂದರು.

 ಪ್ರತಿಯೊಂದು ಚುನಾವಣೆಯಲ್ಲಿಯೂ ಆರ್ಥಿಕತೆಯು ಪ್ರಮುಖ ಚುನಾವಣಾ ವಿಷಯವಾಗಿರುತ್ತದೆ.ಮತದಾರನು ದೇಶದ ಆರ್ಥಿಕತೆಯ ನಿರ್ಮಾಣದ ಬಗ್ಗೆ ವಾಸ್ತವಿಕವಾದ ಪ್ರಯತ್ನಗಳು ನಡೆಯುತ್ತಿರುವುದನ್ನು ಕಾಣುತ್ತಿದ್ದಾನೆ ಎಂದರು.

 ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕೆಲವೊಂದು ಸುಧಾರಣೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕೇಂದರ ಸರಕಾ ಶ್ರಮಿಸುತ್ತಿದಗೆಯೆಂದರು.

 ಬ್ಯಾಂಕ್ ಬಡ್ಡಿದರದಲ್ಲಿ ಇಳಿಕೆಗಿರುವ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರಿಗೆ ಆಧಾರವಾಗುವ ನಿಟ್ಟಿನಲ್ಲಿಯೂ ಕೇಂದ್ರ ಸರಕಾರ ಶ್ರಮಿಸುತ್ತಿದೆ ಎಂದರು.

ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಮರುಚೈತನ್ಯ

ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ನಡೆದ ಇನ್ನೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಿರ್ಮಲಾ ಅವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ನೆಲೆಸಿರುವ ಮಂದಗತಿಯನ್ನು ನಿವಾರಿಸಬೇಕಾಗಿದೆ ಎಂದು ಅಭಿಪ್ರಾಯಿಸಿದ್ದಾರೆ ಹಾಗೂ ರಿಯಲ್‌ ಎಸ್ಟೇಟ್ ವಲಯಕ್ಕೆ ಚೈತನ್ಯ ತುಂಬಲು ಕೇಂದ್ರ ಸರಕಾರವು ತುಂಬಾ ಆಸಕ್ತವಾಗಿದೆ ಎಂದವರು ಹೇಳಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಜೊತೆ ಕೈಜೋಡಿಸಿ ಅದು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಬಾಧಿತರಾದ ವ್ಯಕ್ತಿಗಳನ್ನು ನೆರವಾಗುವುದಕ್ಕೆ ಇರುವ ಅಡಚಣೆಗಳನ್ನು ತೊಡೆದುಹಾಕಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಡೆಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News