ಹೊಂಡ- ಗುಂಡಿಗಳಿಂದ ತುಂಬಿಕೊಂಡಿರುವ ಪೆರಿಯಡ್ಕ ಮುರದಮೇಲು ರಸ್ತೆ

Update: 2019-11-06 17:46 GMT

ಉಪ್ಪಿನಂಗಡಿ: ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾದ ಎರಡು ಗ್ರಾಮಗಳನ್ನು ಬೆಸೆಯುವ ಪೆರಿಯಡ್ಕ- ಕೊರಂಬಾಡಿ- ಮುರದಮೇಲು ರಸ್ತೆಯ ಅರ್ಧ ಭಾಗ ಇನ್ನೂ ಕಚ್ಛಾ ಮಣ್ಣಿನ ರಸ್ತೆಯಾಗಿಯೇ ಉಳಿದಿದ್ದು, ಹೊಂಡ- ಗುಂಡಿಗಳಿಂದ ತುಂಬಿಕೊಂಡಿದೆ.

ಉಪ್ಪಿನಂಗಡಿ ಗ್ರಾಮದ ಪಂಚೇರು, ಕೊರಂಬಾಡಿ ಪ್ರದೇಶಗಳು ಹಿಂದಿನಿಂದಲೇ ಕೃಷಿಗೆ ಹೆಸರಾಗಿದ್ದು, ಆ ಭಾಗದಲ್ಲಿದ್ದ ಕೆಲವು ಜಮೀನ್ದಾರರು ಹಿಂದೆ ಸಂಪರ್ಕಕ್ಕಾಗಿ ಎತ್ತಿನಗಾಡಿಯನ್ನು ಬಳಸುತ್ತಿದ್ದರು. ತಮ್ಮಲ್ಲಿದ್ದ ಎತ್ತಿನಗಾಡಿಗಳು ಹೋಗಲು ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕದಿಂದ ಪಂಚೇರಿಗೆ ಆ ಕಾಲದಲ್ಲಿ ರಸ್ತೆಯನ್ನು ನಿರ್ಮಿಸಿದ್ದರು. ಕೊರಂಬಾಡಿಯ ಬಳಿಯಿರುವ ಕಿರು ಹೊಳೆಯನ್ನು ದಾಟಿದರೆ ಹಿರೇಬಂಡಾಡಿ ಗ್ರಾಮವನ್ನು ಸಂಪರ್ಕಿಸಲು ಸಾಧ್ಯವಾಗುತ್ತಿತ್ತು.  ಕಾಲಕ್ರಮೇಣ ಆ ಭಾಗದಲ್ಲಿ ಮನೆಗಳು ಹೆಚ್ಚಾಗತೊಡಗಿದ್ದು, ಕಿರಿದಾಗಿದ್ದ ಆ ರಸ್ತೆ ಅಗಲಗೊಂಡಿತ್ತಲ್ಲದೆ, ಎತ್ತಿನಗಾಡಿ ಮರೆಯಾಗಿ ವಾಹನಗಳು ರಸ್ತೆಗಿಳಿದವು. ಇದೀಗ ಈ ಭಾಗದಲ್ಲಿ ಮನೆಗೊಂದರಂತೆ ವಾಹನವಿದ್ದು, ಜನಸಂಖ್ಯೆಯೂ ಹೆಚ್ಚಳಗೊಂಡಿದೆ.  ಈ ರಸ್ತೆ ಪೆರಿಯಡ್ಕದಿಂದ ಆರಂಭವಾಗಿ ಹಿರೇಬಂಡಾಡಿ ಗ್ರಾಮದ ಮುರದಮೇಲುವನ್ನು ತಲುಪುತ್ತದೆ. ಆದರೂ ಎರಡು ಗ್ರಾಮಗಳನ್ನು ಸಂಧಿಸುವ ರಸ್ತೆಯ ಅಭಿವೃದ್ಧಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಇನ್ನೂ ಆಗಿಲ್ಲ.

ಉಪ್ಪಿನಂಗಡಿ ಗ್ರಾಮದ ಪಂಚೇರು ಮತ್ತು ಹಿರೇಬಂಡಾಡಿ ಗ್ರಾಮದ ಕೊರಂಬಾಡಿ ಮಧ್ಯದಲ್ಲಿ ಇರುವ ಕಿರು ಹೊಳೆಯನ್ನು ದಾಟಿದರೆ ಎರಡು ಗ್ರಾಮಗಳನ್ನು ಸಂಧಿಸಲು ಇರುವ ಸುಲಭ ಮಾರ್ಗ. ಈ ಹಿಂದೆ ಎರಡು ಗ್ರಾಮಗಳವರು ಬೇಸಿಗೆಯಲ್ಲಿ ಕಿರು ಹೊಳೆಯನ್ನು ದಾಟಿ ಹೋಗುತ್ತಿದ್ದರೆ, ಮಳೆಗಾಲದಲ್ಲಿ ಕಿರು ಹೊಳೆಗೆ ದೊಡ್ಡ ಪಾಲವನ್ನು ನಿರ್ಮಿಸಿ ಅದರ ಮೂಲಕ ನದಿ ದಾಟುತ್ತಿದ್ದರು. ಬಳಿಕ ಇಲ್ಲೊಂದು ಸೇತುವೆ ನಿರ್ಮಾಣವಾಗಬೇಕೆಂಬ ಬೇಡಿಕೆಯೂ ಎರಡೂ ಕಡೆಯ ಗ್ರಾಮಸ್ಥರಿಂದ ವ್ಯಕ್ತವಾಯಿತು. ಲೋಕೋಪಯೋಗಿ ಇಲಾಖೆಯ ನಬಾರ್ಡ್ನ ಆರ್‌ಐಡಿಎಫ್ 14ರ ಯೋಜನೆಯಡಿಯಲ್ಲಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಇಲ್ಲಿ ಸೇತುವೆಗೆ ಶಂಕು ಸ್ಥಾಪನೆ ನಡೆದು 2011ರಲ್ಲಿ ಇದರ ಲೋಕಾರ್ಪಣೆಯೂ ಆಯಿತು. ಸೇತುವೆ ನಿರ್ಮಾಣಗೊಂಡು 8 ವರ್ಷ ಕಳೆದರೂ ಇಲ್ಲಿ ಉತ್ತಮ ರಸ್ತೆ ಮಾತ್ರ ಇಲ್ಲಿ ನಿರ್ಮಾಣವಾಗಲೇ ಇಲ್ಲ.

ಗ್ರಾಮ ಸಡಕ್ ಬಂದಿಲ್ಲ: ಎರಡೂ ಗ್ರಾಮದ ಈ ಭಾಗದ ಜನರು ಪ್ರಮುಖವಾಗಿ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಎರಡೂ ಗ್ರಾಮಗಳಲ್ಲಿ ಹಾಲಿನ ಸೊಸೈಟಿಗಳು ಇವೆ. ಪ್ರಾಥಮಿಕ, ಪ್ರೌಢಶಾಲೆಗಳಿವೆ. ಗ್ರಾಮ ಸಡಕ್ ಯೋಜನೆಗೆ ಆಯ್ಕೆಯಾಗಲು ಬೇಕಾದ ಮಾನದಂಡಗಳಿದ್ದರೂ ಈ ರಸ್ತೆ ಮಾತ್ರ ಗ್ರಾಮ ಸಡಕ್‌ಗೂ ಆಯ್ಕೆಯಾಗಿಲ್ಲ. ದಿನಂಪ್ರತಿ ನೂರಾರು ವಾಹನಗಳು ಓಡಾಡುವ, ನೂರಾರು ಮನೆಗಳಿಗೆ ಸಂಪರ್ಕ ಕಲ್ಪಿಸುವ, ಎರಡು ಗ್ರಾಮಗಳನ್ನು ಬೆಸೆಯುವ ಈ ರಸ್ತೆ ಇನ್ನೂ ಕೂಡಾ ಗ್ರಾ.ಪಂ.ನ ಸುಪರ್ದಿಯಲ್ಲಿದೆ.

ಸ್ವಲ್ಪ ಭಾಗ ಡಾಮರು:  ಉಪ್ಪಿನಂಗಡಿ ಗ್ರಾ.ಪಂ. ತನ್ನಲ್ಲಿರುವ ಅಲ್ಪ ನಿಧಿಯಿಂದ 2013-14ರಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಪೆರಿಯಡ್ಕದಿಂದ ಕೆಲವು ಮೀಟರ್‌ಗಳಷ್ಟು ಡಾಮರು ಕಾಮಗಾರಿ ನಡೆಸಿತ್ತು. ಬಳಿಕ 5 ಲಕ್ಷ ರೂ. ವೆಚ್ಚದಲ್ಲಿ ಡಾಮರು ಕಾಮಗಾರಿ ನಡೆಸಿತ್ತು. ಈ ಬಾರಿಯ ಆಡಳಿತ ಮಂಡಳಿಯು 20 ಲಕ್ಷ ರೂ.ನಲ್ಲಿ ಇದೇ ರಸ್ತೆಗೆ ಡಾಮರು ಕಾಮಗಾರಿ ನಡೆಸಿದೆ. ಹೀಗೆ ಮೂರು ಬಾರಿ ಮುಂದುವರಿಕೆ ಡಾಮರು ಕಾಮಗಾರಿ ಪೆಲತ್ರೋಡಿ ತನಕ ಮುಟ್ಟಿದ್ದು, ಈ ಮೂಲಕ ಸ್ವಲ್ಪ ಮಟ್ಟಿಗಾದರೂ ರಸ್ತೆಯ ಅಭಿವೃದ್ಧಿಗೆ ಮುಂದಾಗಿದೆ. ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಪೆಲತ್ರೋಡಿಯಿಂದ ಸೇತುವೆ ತನಕ ಈ ರಸ್ತೆ ಡಾಮರು ಕಾಮಗಾರಿ ಕಂಡಿಲ್ಲ. ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಇನ್ನೂ ಸುಮಾರು ಎರಡು ಕಿ.ಮೀ.ಗೂ ಹೆಚ್ಚು ರಸ್ತೆ ಡಾಮರೀಕರಣಗೊಳ್ಳಲು ಬಾಕಿ ಇದ್ದು, ಮಣ್ಣಿನ ಕಚ್ಛಾ ರಸ್ತೆಯಾಗಿಯೇ ಉಳಿದುಕೊಂಡಿದೆ. ಮೂರನೇ ಹಂತ ತಲುಪಿದಾಗ ಮೊದಲ ಹಂತದ ಡಾಮರು ಕಾಮಗಾರಿ ಹೋಗುತ್ತಾ ಬಂದಿದೆ. ಈ ಭಾಗದಲ್ಲಿ ಕೆಲವು ಕಡೆ ಹೊಂಡ-ಗುಂಡಿಗಳು ತುಂಬಿಕೊಂಡಿದ್ದು, ಇನ್ನು ಕೆಲವೆಡೆ ರಸ್ತೆ ಪೂರ್ತಿ ಕೆಸರು ತುಂಬಿಕೊಂಡು ಸಂಚಾರಕ್ಕೆ ಅಸಾಧ್ಯವಾಗಿದೆ.  ಹಿರೇಬಂಡಾಡಿ ಗ್ರಾಮದಲ್ಲಿ ರಸ್ತೆಯ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಇದು ಸಂಪೂರ್ಣ ಮಣ್ಣಿನ ರಸ್ತೆಯಾಗಿಯೇ ಇದ್ದು, ಕೆಸರು, ಹೊಂಡ - ಗುಂಡಿಗಳಿಂದ ಕೂಡಿ ಸಂಚಾರಕ್ಕೆ ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ಎರಡೂ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವೆಡೆ ಈ ರಸ್ತೆಯು ಖಾಸಗಿ ವ್ಯಕ್ತಿಗಳ ಅತಿಕ್ರಮಣಕ್ಕೆ ಒಳಗಾಗಿದ್ದು, ಕೆಲವು ಕಡೆ ಒಮ್ಮೆಗೆ ಒಂದು ವಾಹನ ಹಾದುಹೋಗುವಷ್ಟು ಮಾತ್ರ ಸ್ಥಳಾವಕಾಶವಿದೆ.

ಹೀಗೆ ಎರಡು ಗ್ರಾಮಗಳನ್ನು ಒಗ್ಗೂಡಿಸಿ ಹಲವರ ಬದುಕನ್ನು ಬೆಸೆಯಬಲ್ಲ ಎಲ್ಲರ ಕನಸಿನ ರಸ್ತೆಯಾದ ಪೆರಿಯಡ್ಕ- ಕೊರಂಬಾಡಿ - ಹಿರೇಬಂಡಾಡಿ ರಸ್ತೆಯೂ ಸ್ವಾತಂತ್ರ್ಯ  ಬಂದು 72 ವರ್ಷ ಕಳೆದರೂ ಇನ್ನೂ ಅದರ ಮೂಲ ಅಸ್ತಿತ್ವವನ್ನೇ ಉಳಿಸಿಕೊಂಡಿದೆ. ಒಂದು ಕೋಟಿಯ ಸೇತುವೆ ನಿರ್ಮಾಣವಾದರೂ, ಉತ್ತಮ ರಸ್ತೆಯೆನ್ನುವುದು ಇಲ್ಲಿಗೆ ಮರಿಚಿಕೆಯಾಗಿದ್ದು, ಈ ಬಾರಿಯಾದರೂ ಇಲ್ಲಿ ಬದಲಾವಣೆಯ ಗಾಳಿ ಬೀಸಬಹುದೇ ಎಂದು ಕಾದು ನೋಡಬೇಕಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ರಸ್ತೆ ಅಭಿವೃದ್ಧಿಗೆ 50 ಲಕ್ಷ ಅನುದಾನ: ಮಠಂದೂರು

ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕದಿಂದ ಹಿರೇಬಂಡಾಡಿ ಗ್ರಾಮದ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದ ಬಳಿಯ ಕುಮಾರಧಾರ ನದಿ ಬದಿಯವರೆಗೆ ಒಟ್ಟು ಆರು ಕಿ.ಮೀ. ಉದ್ದ ರಸ್ತೆ ನಿರ್ಮಾಣಕ್ಕೆ ಗ್ರಾಮ ಸಡಕ್‌ಗೆ ಪ್ರಸ್ತಾವನೆ ಈ ಹಿಂದೆಯೇ ಕಳಿಸಲಾಗಿದೆ. ಆದರೆ ಕಳೆದ 10 ವರ್ಷಗಳಿಂದ ಸಡಕ್‌ನ ಕಾಮಗಾರಿಗಳು ನಡೆದಿಲ್ಲ. ಅವರು ಈಗ ಹೊಸ ಪ್ರಸ್ತಾವನೆಗಳನ್ನು ತೆಗೆದುಕೊಳ್ಳುತ್ತಿಲ್ಲ. ಇಲ್ಲಿ ಉತ್ತಮ ರಸ್ತೆ ನಿರ್ಮಾಣದ ಮೂಲಕ ಎರಡು ಗ್ರಾಮಗಳನ್ನು ಬೆಸೆಯಬೇಕು ಎನ್ನುವುದು ನನ್ನ ಕನಸು. ಆದ್ದರಿಂದ ಈಗಾಗಲೇ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಇದಕ್ಕೆ 50 ಲಕ್ಷ ರೂ. ಅನ್ನು ಮಂಜೂರುಗೊಳಿಸಿದ್ದೇನೆ. ಇದರಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸುವುದಾದರೆ ಸ್ವಲ್ಪಭಾಗ ಮಾತ್ರ ನಡೆಸಬಹುದು. ಉಪ್ಪಿನಂಗಡಿ ಗ್ರಾಮದ ಪೆಲತ್ರೋಡಿಯ ತನಕ ಈಗ ಡಾಮರು ಕಾಮಗಾರಿ ಆಗಿದ್ದು, 50 ಲಕ್ಷ ರೂ.ನಲ್ಲಿ ಇಲ್ಲಿಂದ ಹಿರೇಬಂಡಾಡಿ ಗ್ರಾಮದ ಮುಖ್ಯ ರಸ್ತೆಗೆ ಕೂಡುವ ಜಾಗವಾದ ಮುರದಮೇಲುವಿನ ತನಕ ಡಾಮರು ಕಾಮಗಾರಿ ನಡೆಸಬಹುದು.

- ಸಂಜೀವ ಮಠಂದೂರು, ಶಾಸಕರು

ಹಿರೇಬಂಡಾಡಿ ಗ್ರಾಮವು ಪುತ್ತೂರು ವಿಧಾಸಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಅವರ ತವರು ಗ್ರಾಮವಾಗಿದೆ. ಈ ಸಂಪರ್ಕ ರಸ್ತೆಯ ಮೂಲಕ ಹಿರೇಬಂಡಾಡಿ- ಉಪ್ಪಿನಂಗಡಿ ಗ್ರಾಮಗಳನ್ನು ಬೆಸೆಯುವ ಕನಸು ಅವರಿಗೂ ಇತ್ತು. ಆ ಸಂದರ್ಭದಲ್ಲಿ ಕೊರಂಬಾಡಿಯಲ್ಲಿ ಸೇತುವೆ ನಿರ್ಮಾಣದ ಹಿಂದೆ ಇವರ ಶ್ರಮವು ಸಾಕಷ್ಟಿತ್ತು. ಈಗ ಅವರು ಶಾಸಕರಾಗಿಯೂ ಆಯ್ಕೆಯಾಗಿದ್ದಾರೆ. ಅವರು ಮನಸ್ಸು ಮಾಡಿದರೆ ಹಲವು ವರ್ಷಗಳ ನಮ್ಮ ಉತ್ತಮ ರಸ್ತೆ ನಿರ್ಮಾಣದ ಕನಸು ಈಡೇರಲು ಸಾಧ್ಯ ಎನ್ನುತ್ತಾರೆ ಗ್ರಾಮಸ್ಥರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News