ಪಾಕಿಸ್ತಾನದ ಕರ್ತಾರ್‌ಪುರ ವೀಡಿಯೊದಲ್ಲಿ ಮೃತ ಖಾಲಿಸ್ತಾನಿ ಪ್ರತ್ಯೇಕತವಾವಾದಿಗಳು

Update: 2019-11-06 18:10 GMT

ಇಸ್ಲಾಮಾಬಾದ್, ನ. 6: ಸಿಖ್ಖರ ಪವಿತ್ರ ಸ್ಥಳ ಕರ್ತಾರ್‌ ಪುರಕ್ಕೆ ಹೋಗುವ ಕರ್ತಾರ್‌ ಪುರ ಕಾರಿಡಾರ್‌ ನ ಉದ್ಘಾಟನೆಗೆ ಪೂರ್ವಭಾವಿಯಾಗಿ ಪಾಕಿಸ್ತಾನ ಬಿಡುಗಡೆ ಮಾಡಿರುವ ವೀಡಿಯೊವೊಂದರಲ್ಲಿ ಮೂವರು ಖಾಲಿಸ್ತಾನ್ ಪ್ರತ್ಯೇಕತಾವಾದಿಗಳು ಕಾಣಿಸಿಕೊಂಡಿದ್ದಾರೆ ಹಾಗೂ ‘ಖಾಲಿಸ್ತಾನ್ 2020’ ಎಂಬ ಬರಹವೂ ಕಾಣಿಸಿಕೊಂಡಿದೆ.

ಪಾಕಿಸ್ತಾನದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸೋಮವಾರ 4 ನಿಮಿಷಗಳ ಅವಧಿಯ ವೀಡಿಯೊವನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಪಾಕಿಸ್ತಾನದ ಕರ್ತಾರ್‌ಪುರದಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಿರುವ ಸಿಖ್ ಯಾತ್ರಿಕರ ತುಣುಕುಗಳನ್ನು ತೋರಿಸಲಾಗಿದೆ. ಒಂದು ತುಣುಕಿನ ಹಿನ್ನೆಲೆಯಲ್ಲಿ ಖಾಲಿಸ್ತಾನ್ ಪ್ರತ್ಯೇಕತಾವಾದಿಗಳಾದ ಭಿಂದ್ರನ್‌ ವಾಲೆ, ಮೇಜರ್ ಜನರಲ್ ಶಬೇಗ್ ಸಿಂಗ್ ಮತ್ತು ಅಮ್ರಿಕ್ ಸಿಂಗ್ ಖಾಲ್ಸಾರನ್ನೊಳಗೊಂಡ ಪೋಸ್ಟರ್ ಇದೆ.

ಭಿಂದ್ರನ್‌ವಾಲೆ ಸಿಖ್ ಧಾರ್ಮಿಕ ಪಂಥ ‘ದಮ್‌ ದಾಮಿ ತಕ್ಸಲ್’ನ ಮುಖ್ಯಸ್ಥನಾಗಿದ್ದನು. ಮೇಜರ್ ಜನರಲ್ ಶಬೇಗ್ ಸಿಂಗ್ ಭಾರತೀಯ ಸೇನೆಯ ಜನರಲ್ ಆಗಿದ್ದನು. ನಿವೃತ್ತಿಗೆ ಸ್ವಲ್ಪವೇ ಮುನ್ನ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಅವನ ಸೇನಾ ದರ್ಜೆಯನ್ನು ಕಳಚಲಾಗಿತ್ತು. ಬಳಿಕ ಅವನು 1984ರಲ್ಲಿ ಖಾಲಿಸ್ತಾನ್ ಚಳವಳಿಯನ್ನು ಸೇರಿದನು. ಅಮ್ರಿಕ್ ಸಿಂಗ್ ಖಾಲ್ಸಾ ಖಾಲಿಸ್ತಾನಿ ವಿದ್ಯಾರ್ಥಿ ನಾಯಕನಾಗಿದ್ದನು. ಅವನು ಈಗ ನಿಷೇಧಿಸಲ್ಪಟ್ಟಿರುವ ಆಲ್ ಇಂಡಿಯ ಸಿಖ್ ಸ್ಟೂಡೆಂಟ್ಸ್ ಫೆಡರೇಶನ್ (ಎಐಎಸ್‌ಎಸ್‌ಡಿ)ನ ಮುಖ್ಯಸ್ಥನಾಗಿದ್ದನು.

1984ರ ಜೂನ್‌ನಲ್ಲಿ ಭಾರತೀಯ ಸೇನೆಯು ಅಮೃತಸರದಲ್ಲಿ ನಡೆಸಿದ ‘ಆಪರೇಶನ್ ಬ್ಲೂ ಸ್ಟಾರ್’ ಕಾರ್ಯಾಚರಣೆಯಲ್ಲಿ ಈ ಮೂವರೂ ಹತರಾದರು.

ಸಿಖ್ ಧರ್ಮದ ಸ್ಥಾಪಕ ಗುರು ನಾನಕ್ ದೇವ್‌ರ 550ನೇ ಜನ್ಮದಿನ ಸಂದರ್ಭದಲ್ಲಿ ಕರ್ತಾರ್‌ಪುರ ಸಾಹಿಬ್ ಕಾರಿಡಾರನ್ನು ಭಾರತೀಯ ಸಿಖ್ ಯಾತ್ರಿಗಳಿಗೆ ತೆರೆಯುವ ಒಪ್ಪಂದಕ್ಕೆ ಭಾರತ ಮತ್ತು ಪಾಕಿಸ್ತಾನ ಅಕ್ಟೋಬರ್ 24ರಂದು ಸಹಿ ಹಾಕಿವೆ.

ಪಾಕ್ ಉದ್ದೇಶದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಅಮರಿಂದರ್ ಸಿಂಗ್

ಪಂಜಾಬ್‌ನಲ್ಲಿ ಸಿಖ್ ಭಯೋತ್ಪಾದನೆಗೆ ಮರುಜೀವ ನೀಡಲು ಕರ್ತಾರ್‌ಪುರ ಕಾರಿಡಾರನ್ನು ಪಾಕಿಸ್ತಾನ ಬಳಸಿಕೊಳ್ಳಬಹುದು ಎಂಬ ಆತಂಕವನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಈಗಾಗಲೇ ವ್ಯಕ್ತಪಡಿಸಿದ್ದಾರೆ.

ಹಲವಾರು ಭಾರತೀಯ ಗುಪ್ತಚರ ಸಂಸ್ಥೆಗಳು ಮತ್ತು ರಕ್ಷಣಾ ಪರಿಣತರೂ ಕರ್ತಾರ್‌ಪುರ ಕಾರಿಡಾರನ್ನು ತೆರೆಯುವ ಪಾಕಿಸ್ತಾನದ ಉದ್ದೇಶವನ್ನು ಪ್ರಶ್ನಿಸಿದ್ದಾರೆ.

ಅಮೆರಿಕದಲ್ಲಿ ನೆಲೆ ಹೊಂದಿರುವ ‘ಸಿಖ್ಸ್ ಫಾರ್ ಜಸ್ಟೀಸ್’ ಎಂಬ ಗುಂಪು, ಕಾರಿಡಾರನ್ನು ಬಳಸಿಕೊಂಡು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ನೆರವಿನೊಂದಿಗೆ ‘ಜನಮತಗಣನೆ 2020’ ಅಭಿಯಾನಕ್ಕೆ ವೇಗ ನೀಡಲು ಪ್ರಯತ್ನಿಸುತ್ತಿದೆ.

ನ. 8, 9ರಂದು ಉದ್ಘಾಟನೆ

ಕರ್ತಾರ್‌ಪುರ ಕಾರಿಡಾರ್‌ನ ಉದ್ಘಾಟನೆಗೆ ಕೆಲವೇ ದಿನಗಳು ಇರುವಂತೆಯೇ ಪಾಕಿಸ್ತಾನ ಸರಕಾರ ಈ ವೀಡಿಯೊವನ್ನು ಬಿಡುಗಡೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8ರಂದು ಭಾರತೀಯ ಕಡೆಯಿಂದ ಕರ್ತಾರ್‌ಪುರ ಕಾರಿಡಾರನ್ನು ಉದ್ಘಾಟಿಸಿದರೆ, ಪಾಕಿಸ್ತಾನದ ಕಡೆಯಿಂದ ಆ ದೇಶದ ಪ್ರಧಾನಿ ಇಮ್ರಾನ್ ಖಾನ್ ಮರು ದಿನ, ಅಂದರೆ ನವೆಂಬರ್ 9ರಂದು ಉದ್ಘಾಟಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News