ಭಾರತಕ್ಕೆ ಏಕದಿನ ಸರಣಿ ಜಯ

Update: 2019-11-08 05:34 GMT

ಮಹಿಳಾ ಕ್ರಿಕೆಟ್

ಆ್ಯಂಟಿಗುವಾ, ನ.7: ಆರಂಭಿಕ ಆಟಗಾರ್ತಿಯರಾದ ಸ್ಮತಿ ಮಂಧಾನ ಹಾಗೂ ಜೆಮಿಮಾ ರೋಡ್ರಿಗಸ್ ಅವಳಿ ಅರ್ಧಶತಕಗಳ ನೆರವಿನಿಂದ ಭಾರತದ ಮಹಿಳಾ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು 6 ವಿಕೆಟ್‌ಗಳ ಅಂತರದಿಂದ ಸುಲಭವಾಗಿ ಗೆದ್ದುಕೊಂಡಿದೆ.

ಈ ಗೆಲುವಿನ ಮೂಲಕ ಭಾರತ 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು.

ಬುಧವಾರ ರಾತ್ರಿ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಗೆಲ್ಲಲು 195 ರನ್ ಬೆನ್ನಟ್ಟಿದ ಭಾರತ ತಂಡ ಸ್ಮತಿ ಮಂಧಾನ (74,63 ಎಸೆತ, 9 ಬೌಂಡರಿ, 3 ಸಿಕ್ಸರ್, ರೋಡ್ರಿಗಸ್(69, 92 ಎಸೆತ, 6 ಬೌಂಡರಿ) ಮೊದಲ ವಿಕೆಟ್ ಜೊತೆಯಾಟ ದಲ್ಲಿ ಸೇರಿಸಿದ 141 ರನ್ ನೆರವಿನಿಂದ 47 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.

ಇದಕ್ಕೂ ಮೊದಲು ಬ್ಯಾಟಿಂಗ್ ಆಯ್ದುಕೊಂಡ ವಿಂಡೀಸ್ ಮಹಿಳಾ ತಂಡ ಕಳಪೆ ಆರಂಭ ಪಡೆದಿದ್ದು, ಆರಂಭಿಕ ಆಟಗಾರ್ತಿ ಯರು ಉತ್ತಮ ಪ್ರದರ್ಶನ ನೀಡಲು ವಿಫಲರಾದರು. ಜುಲನ್ ಗೋಸ್ವಾಮಿ ಹಾಗೂ ಶಿಖಾ ಪಾಂಡೆ ಅವರ ಮೊದಲೆರಡು ಓವರ್‌ಗಳಲ್ಲಿ ಹಾಲೆ ಮ್ಯಾಥ್ಯೂಸ್ ಹಾಗೂ ನಟಾಶಾ ಮೆಕ್‌ಲೀನ್ ರನ್ ಗಳಿಸಲು ಪರದಾಟ ನಡೆಸಿದರು.

ವಿಂಡೀಸ್ 20 ಓವರ್‌ಗಳಲ್ಲಿ 50 ರನ್‌ಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಸ್ಟಾಸಿ-ಅನ್ ಕಿಂಗ್(38) ಹಾಗೂ ಸ್ಟೆಫಾನಿ ಟೇಲರ್ (79 ರನ್) ಆರನೇ ವಿಕೆಟ್‌ಗೆ 96 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಉಳಿದ ಆಟಗಾರ್ತಿಯರು ಒಂದಂಕಿ ರನ್ ಗಳಿಸಿ ಔಟಾಗಿದ್ದು, ವಿಂಡೀಸ್ 50 ಓವರ್‌ಗಳಲ್ಲಿ 194 ರನ್‌ಗೆ ಆಲೌಟಾಯಿತು.

112 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಾಯದಿಂದ 79 ರನ್ ಗಳಿಸಿದ ಟೇಲರ್ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಸ್ಮತಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಸರಣಿಯಲ್ಲಿ ಮೊದಲ ಬಾರಿ ಆಡಿದ ಸ್ಮತಿ ಮಂಧಾನ ರನ್ ಚೇಸಿಂಗ್ ವೇಳೆ ಆತ್ಮವಿಶ್ವಾಸಭರಿತರಾಗಿ ಆಡಿದರು. ರೋಡ್ರಿಗಸ್ ಜೊತೆಗೂಡಿ ವಿಂಡೀಸ್ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. 141 ರನ್ ಜೊತೆಯಾಟ ನಡೆಸಿದ ಈ ಜೋಡಿಯನ್ನು ಮ್ಯಾಥ್ಯೂಸ್ ಬೇರ್ಪಡಿಸಿದರು. ಭಾರತ 42.1 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 195 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇದೀಗ ಉಭಯ ತಂಡಗಳು 5 ಪಂದ್ಯಗಳ ಟ್ವೆಂಟಿ-20 ಸರಣಿಯನ್ನಾಡಲಿವೆ. ಮೊದಲೆರಡು ಪಂದ್ಯಗಳು ನ.9, 10ರಂದು ಡರೆನ್ ಸಮ್ಮಿ ಸ್ಟೇಡಿ ಯಂನಲ್ಲಿ ನಡೆಯಲಿದೆ.

ಏಕದಿನದಲ್ಲಿ 2000 ರನ್ ದಾಖಲೆ

ಭಾರತದ ಮಹಿಳಾ ಕ್ರಿಕೆಟ್ ತಂಡದ ಸಾರ್ ಆಟಗಾರ್ತಿ ಸ್ಮತಿ ಮಂಧಾನ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 2000 ರನ್ ಗಳಿಸಿದ ಭಾರತದ ಎರಡನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ.

 ಮಂಧಾನ 51 ಇನಿಂಗ್ಸ್‌ಗಳಲ್ಲಿ 2,000 ರನ್ ದಾಖಲಿಸುವ ಮೂಲಕ ಭಾರತದ ಪರ ವೇಗಿಶಿಖರ್ ಧವನ್ ಬಳಿಕ ಈ ಸಾಧನೆ ಮಾಡಿದ್ದಾರೆ . ಧವನ್ 48 ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು. ವಿಶ್ವದ ಕ್ರಿಕೆಟ್ ಆಟಗಾರ್ತಿಯರ ಪೈಕಿ ಮಂಧಾನ ವೇಗವಾಗಿ 2000 ರನ್ ಮೂರನೇ ಸ್ಥಾನದಲ್ಲಿದ್ದಾರೆ. ಬೆಲಿಂಡಾ ಕ್ಲಾರ್ಕ್ ಮತ್ತು ಮೆಗ್ ಲ್ಯಾನಿಂಗ್ ಈ ಸಾಧನೆ ಮಾಡಿದ ವಿಶ್ವದ ಮಹಿಳಾ ಕ್ರಿಕೆಟ್ ಆಟಗಾರ್ತಿಯರು.

ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತದ ಮಹಿಳಾ ತಂಡ 6 ವಿಕೆಟ್‌ಗಳ ಜಯ ಗಳಿಸಿತ್ತು. ಆರಂಭಿಕ ಆಟಗಾರ್ತಿಯರಾದ ಮಂಧಾನ ಮತ್ತು ಜೆಮಿಮಾ ರೋಡ್ರಿಗಸ್ ಮೊದಲ ವಿಕೆಟ್‌ಗೆ 141 ರನ್‌ಗಳ ಜೊತೆಯಾಟ ನೀಡಿದ್ದರು. ಮಂಧಾನ 74 ರನ್ ಗಳಿಸಿದ್ದರು. ಅವರು ಏಕದಿನ ಕ್ರಿಕೆಟ್‌ನಲ್ಲಿ ಇದೀಗ 2,052 ರನ್ ಸಂಪಾದಿಸಿದ್ದಾರೆ. 4 ಶತಕ ಮತ್ತು 17 ಅರ್ಧಶತಕಗಳನ್ನು ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News