100ನೇ ಟ್ವೆಂಟಿ-20 ಪಂದ್ಯ ಆಡಿದ ಭಾರತದ ಮೊದಲ ಆಟಗಾರ ರೋಹಿತ್ ಶರ್ಮಾ

Update: 2019-11-08 05:37 GMT

ರಾಜ್‌ಕೋಟ್, ನ.7: ಬಾಂಗ್ಲಾದೇಶ ವಿರುದ್ಧ ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಗುರುವಾರ ಎರಡನೇ ಟ್ವೆಂಟಿ-20 ಪಂದ್ಯವನ್ನು ಆಡಲು ಮೈದಾನಕ್ಕಿಳಿದ ಭಾರತದ ಹಂಗಾಮಿ ನಾಯಕ ರೋಹಿತ್ ಶರ್ಮಾ ಅಪರೂಪದ ಸಾಧನೆ ಮಾಡಿದರು. ರೋಹಿತ್ 100ನೇ ಟ್ವೆಂಟಿ-20 ಪಂದ್ಯವನ್ನಾಡಿದ ಭಾರತದ ಮೊತ್ತ ಮೊದಲ ಹಾಗೂ ವಿಶ್ವದ ಎರಡನೇ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು.

 ಅಂತರ್‌ರಾಷ್ಟ್ರೀಯ ಮಟ್ಟದ ಚುಟುಕು ಮಾದರಿ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಶುಐಬ್ ಮಲಿಕ್(111 ಟಿ-20)ಮಾತ್ರ 100ಕ್ಕೂ ಅಧಿಕ ಪಂದ್ಯಗಳನ್ನು ಆಡಿದ್ದಾರೆ. ಭಾರತದ ಆಟಗಾರರ ಪೈಕಿ ಎಂಎಸ್ ಧೋನಿ(98 ಪಂದ್ಯಗಳು)ಗರಿಷ್ಠ ಪಂದ್ಯವನ್ನಾಡಿದ ಸಾಧನೆ ಮಾಡಿದ ಎರಡನೇ ಆಟಗಾರನಾಗಿದ್ದಾರೆ. ಬಾಂಗ್ಲಾ ವಿರುದ್ಧ ಸರಣಿಯ ಮೊದಲ ಪಂದ್ಯದಲ್ಲಿ ಆಡುವುದರೊಂದಿಗೆ ರೋಹಿತ್ ಅವರು ಧೋನಿ ದಾಖಲೆಯನ್ನು ಹಿಂದಿಕ್ಕಿದ್ದರು.

  ಹೊಸ ಮೈಲುಗಲ್ಲನ್ನು ತಲುಪಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್,ಱಱ ನಾನು ಇಷ್ಟೊಂದು ಪಂದ್ಯಗಳನ್ನು ಆಡುತ್ತೇನೆಂದು ಯೋಚಿಸಿಯೇ ಇರಲಿಲ್ಲ. 2007ರಲ್ಲಿ ಟಿ-20 ಕ್ರಿಕೆಟ್‌ಗೆ ಕಾಲಿಟ್ಟ ಬಳಿಕ ಸುದೀರ್ಘ ಪಯಣ ಸಾಗಿದೆ. ಇದರಲ್ಲಿ ಏರುಪೇರುಗಳಿದ್ದವು. ಇದೀಗ ನಾನು ತಲುಪಿರುವ ಸ್ಥಾನದ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ಯಾವುದೇ ಸ್ಕೋರನ್ನು ವಿಶೇಷ ಎಂದು ಹೇಳಲಾರೆ. ನಾನು ಎಲ್ಲ ಸ್ಕೋರನ್ನು ಇಷ್ಟಪಡುತ್ತೇನೆ. ಇನ್ನಷ್ಟು ಸ್ಮರಣೀಯ ಇನಿಂಗ್ಸ್‌ಗಾಗಿ ಎದುರು ನೋಡುತ್ತಿದ್ದೇನೆೞೞಎಂದರು.

ರೋಹಿತ್ ಈ ತನಕ ಆಡಿರುವ 99 ಪಂದ್ಯಗಳ ಪೈಕಿ 4 ಶತಕ, 17 ಅರ್ಧಶತಕಗಳ ಸಹಿತ 2,452 ರನ್ ಗಳಿಸಿದ್ದು, ಇದರಲ್ಲಿ ನಾಲ್ಕು ಶತಕಗಳಿವೆ. ಹೊಸದಿಲ್ಲಿಯಲ್ಲಿ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಬೇಗನೇ ಔಟಾಗಿದ್ದರೂ ಟ್ವೆಂಟಿ-20ಯಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News