ಸಾತ್ವಿಕ್-ಚಿರಾಗ್ ಕ್ವಾರ್ಟರ್ ಫೈನಲ್ ಗೆ

Update: 2019-11-08 12:57 GMT

ಫುಝೌ(ಚೀನಾ),ನ.7: ಭಾರತೀಯ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದು, ಈಗ ನಡೆಯುತ್ತಿರುವ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದರು.

ಇಲ್ಲಿ ಗುರುವಾರ 65 ನಿಮಿಷಗಳಲ್ಲಿ ಕೊನೆಗೊಂಡ ಪುರುಷರ ಡಬಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಸಾತ್ವಿಕ್‌ಸಾಯಿರಾಜ್-ಚಿರಾಗ್ ಜೋಡಿ ಜಪಾನ್‌ನ ಜೋಡಿ ಹಿರೊಯುಕಿ ಎಂಡೊ ಯುಟಾ ವಟನಬೆ ಅವರನ್ನು 21-18, 21-23, 21-11 ಗೇಮ್‌ಗಳ ಅಂತರದಿಂದ ಸೋಲಿಸಿತು.

ಭಾರತೀಯ ಜೋಡಿ ಸತತ ಎರಡನೇ ಬಾರಿ ಎಂಡೋ-ವಟನಬೆ ವಿರುದ್ಧ ನೇರ ಗೇಮ್‌ಗಳಿಂದ ಜಯ ಸಾಧಿಸಿದೆ. ಕಳೆದ ತಿಂಗಳು ಫ್ರೆಂಚ್ ಓಪನ್‌ನಲ್ಲಿ ಜಪಾನ್ ಜೋಡಿಯನ್ನು ನೇರ ಗೇಮ್‌ಗಳಿಂದ ಮಣಿಸಿತ್ತು.

ಸಾತ್ವಿಕ್‌ಸಾಯಿರಾಜ್-ಚಿರಾಗ್ ಸೆಮಿ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಮುಂದಿನ ಸುತ್ತಿನಲ್ಲಿ ಚೀನಾದ ಲಿ ಜುನ್ ಹುಯ್ ಹಾಗೂ ಲಿಯು ಯು ಚೆನ್‌ರನ್ನು ಮುಖಾಮುಖಿಯಾಗಲಿದ್ದಾರೆ. ಭಾರತದ ಯುವ ಜೋಡಿ ಈ ವರ್ಷ ಉತ್ತಮ ಪ್ರದರ್ಶನ ನೀಡುತ್ತಿದ್ದು, ವಿಶ್ವದ ಅಗ್ರಮಾನ್ಯ ಆಟಗಾರರ ವಿರುದ್ಧ ನಿರಂತರವಾಗಿ ಜಯ ಸಾಧಿಸುತ್ತಾ ಬಂದಿದೆ.

ಸಾತ್ವಿಕ್‌ಸಾಯಿರಾಜ್-ಚಿರಾಗ್ ಕಳೆದ ತಿಂಗಳು ಫ್ರೆಂಚ್ ಓಪನ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದರು. ಆದರೆ, ವಿಶ್ವದ ನಂ.1 ಜೋಡಿ ಮಾರ್ಕಸ್ ಫೆರ್ನಾಲ್ಡಿ ಗಿಡೆಯೊನ್-ಕೆವಿನ್ ಸಂಜಯ ಸುಕಮುಲ್ಜಿಯೊ ವಿರುದ್ಧ ಸೋತಿದ್ದರು. ಇದಕ್ಕೂ ಮೊದಲು ಆಗಸ್ಟ್‌ನಲ್ಲಿ ಥಾಯ್ಲೆಂಡ್ ಓಪನ್‌ನಲ್ಲಿ ಮೊದಲ ಬಾರಿ ಸೂಪರ್ 500 ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News