ಅಫ್ಘಾನಿಸ್ತಾನ ಕ್ರಿಕೆಟ್ ಅಭಿಮಾನಿ ಶೇರ್ ಖಾನ್‌ಗೆ ಲಕ್ನೊದಲ್ಲಿ ವಸತಿ ಸಮಸ್ಯೆ

Update: 2019-11-08 05:42 GMT

  ಲಕ್ನೊ, ನ.7: ಎಂಟು ಅಡಿ ಎತ್ತರದ ಅಫ್ಘಾನಿಸ್ತಾನ ಕ್ರಿಕೆಟ್ ಅಭಿಮಾನಿ ಶೇರ್ ಖಾನ್ ಅವರು ಕ್ರಿಕೆಟ್ ವೀಕ್ಷಿಸಲು ಭಾರತಕ್ಕೆ ಆಗಮಿಸಿ ವಸತಿ ಸೇರಿದಂತೆ ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ.

 ಉತ್ತರ ಪ್ರದೇಶದ ರಾಜಧಾನಿ ಲಕ್ನೊದಲ್ಲಿ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಕ್ರಿಕೆಟ್ ಸರಣಿಯನ್ನು ವೀಕ್ಷಿಸಲು ಆಗಮಿಸಿದಾಗಿನಿಂದ ಶೇರ್ ಖಾನ್ ಸಮಸ್ಯೆಗಳ ಸರಮಾಲೆಯಲ್ಲಿ ಸಿಲುಕಿಕೊಂಡಿದ್ದಾರೆ.

ಎಂಟು ಅಡಿ ಮತ್ತು ಎರಡು ಇಂಚು ಎತ್ತರದ ಅಜಾನುಬಾಹು ಶೇರ್ ಖಾನ್‌ಗೆ ಲಕ್ನೊದಲ್ಲಿ ಉಳಿದು ಕೊಳ್ಳಲು ಯಾವುದೇ ಹೋಟೆಲ್‌ನಲ್ಲೂ ಅವಕಾಶ ಸಿಕ್ಕಿಲ್ಲ. ಬಹುಪಾಲು ಹೋಟೆಲ್‌ಗಳು ಅವರಿಗೆ ವಾಸ್ತವ್ಯಕ್ಕೆ ಕೊಠಡಿ ನೀಡಲು ನಿರಾಕರಿಸಿವೆ ಮತ್ತು ಕೆಲವರು ಅವರನ್ನು ‘ಅನುಮಾನಾಸ್ಪದ’ ವ್ಯಕ್ತಿಯಂತೆ ನಡೆಸಿಕೊಂಡಿದ್ದಾರೆ. ಶೇರ್ ಖಾನ್ ತನ್ನ ಸಮಸ್ಯೆಗೆ ಪರಿಹಾರ ಕಾಣದೆ ಇದ್ದಾಗ ನಾಕಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರು, ಅಲ್ಲಿ ಪೊಲೀಸರು ತಮ್ಮ ರುಜುವಾತುಗಳನ್ನು ಪರಿಶೀಲಿಸಿದ ನಂತರ ಮಂಗಳವಾರ ರಾತ್ರಿ ಹೋಟೆಲ್ ರಾಜಧಾನಿಗೆ ಕರೆದೊಯ್ದರು. ಅಲ್ಲಿಯೂ ಅವರಿಗೆ ಸೂಕ್ತ ಕೊಠಡಿ ಸಿಕ್ಕಿಲ್ಲ. ಹಾಸಿಗೆ ಚಿಕ್ಕದಾಗಿದೆ. ಅವರ ದೇಹಕ್ಕೆ ಹೊಂದಿಕೆಯಾಗುತ್ತಿಲ್ಲ. ಅಲ್ಲಿರುವ ಕುರ್ಚಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಶೇರ್ ಖಾನ್ ಹೇಳಿದ್ದಾರೆ.

ಈ ಪ್ರದೇಶದಲ್ಲಿ ‘ಎತ್ತರದ ಮನುಷ್ಯ’ ಎಂಬ ಸುದ್ದಿ ಹರಡಿದ ಕೂಡಲೇ ಖಾನ್‌ನನ್ನು ನೋಡಲು ಹಲವಾರು ಜನರು ಹೋಟೆಲ್‌ಗೆ ಬಂದರು, ಜನರ ಸಂದಣಿ ಜಾಸ್ತಿಯಾಗುತ್ತಿದ್ದಂತೆ ಪೊಲೀಸರು ಶೇರ್ ಖಾನ್‌ರನ್ನು ಎಕಾನಾ ಕ್ರೀಡಾಂಗಣಕ್ಕೆ ಕರೆದುಕೊಂಡು ಹೋದರು. ಲಕ್ನೊದಲ್ಲಿರುವ ಪ್ರವಾಸಿ ತಾಣಗಳ ಬಗ್ಗೆ ಖಾನ್ ಹೋಟೆಲ್ ಸಿಬ್ಬಂದಿಯನ್ನು ಕೇಳಿದರು ಮತ್ತು ಭೇಟಿ ನೀಡಲು ಬಯಸಿದ್ದರು. ಆದರೆ ಸಮಸ್ಯೆಯೆಂದರೆ ಅವರಿಗೆ ಆಟೊದಲ್ಲಿ ಹೋಗಲು ಸಾಧ್ಯವಾಗಲಿಲ್ಲ.

  ಖಾನ್ ಅವರು ತಮ್ಮ ದೇಶಕ್ಕೆ ಹಿಂದಿರುಗುವ ಮುನ್ನ ಮುಂದಿನ ನಾಲ್ಕು ದಿನಗಳ ಕಾಲ ಲಕ್ನೊದಲ್ಲಿ ಇರುತ್ತಾರೆ. ಇದೀಗ ಅವರು ಎಲ್ಲರ ಗಮನ ಸೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News