ಶಾಸಕ ಕಾಮತ್‌ಗೆ ಕೆಲಸ ಮಾಡಲು ಗೊತ್ತಿಲ್ಲ: ಜೆ.ಆರ್.ಲೋಬೊ

Update: 2019-11-08 07:00 GMT

ಮಂಗಳೂರು, ನ.8: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್‌ರಿಗೆ ಕೆಲಸ ಮಾಡಲು ಗೊತ್ತಿಲ್ಲ. ಕೆಲಸ ಮಾಡುವ ಶಕ್ತಿಯಾಗಲೀ, ಅರ್ಹತೆಯಾಗಲೀ ಅವರಿಗೆ ಇಲ್ಲ. ಮಾಹಿತಿಯ ಕೊರತೆಯಿಂದ ಏನೋ ಹೇಳಿ ಮತದಾರರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಕೆಲಸ ಮಾಡಲು ಗೊತ್ತಿಲ್ಲದಿದ್ದರೆ ರಾಜೀನಾಮೆ ನೀಡಲಿ. ಹೇಗೆ ಕೆಲಸ ಮಾಡಬೇಕು ಎಂದು ನಾನು ತೋರಿಸುತ್ತೇನೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೋ ಹೇಳಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು ನಾನು ಯಾರಿಗೂ ಅನ್ಯಾಯ ಮಾಡಿದವನಲ್ಲ, ಮಾಡುವುದೂ ಇಲ್ಲ. ಬಡವರು ಸ್ವಂತ ಮನೆ ಮಾಡಿಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂಬ ಉದ್ದೇಶದಿಂದಲೇ ಶಕ್ತಿನಗರದಲ್ಲಿ 10 ಎಕರೆ ಜಮೀನು ಮಂಜೂರು ಮಾಡಿಸಿ ಅಲ್ಲಿ ‘ಜಿ ಪ್ಲಸ್ 3’ ಮಾದರಿಯಲ್ಲಿ 1 ಸಾವಿರ ಮಂದಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆ ಕಟ್ಟಿಸಿಕೊಡಲು ಮುಂದಾಗಿದ್ದೆ. ಶಂಕುಸ್ಥಾಪನೆಯನ್ನೂ ಮಾಡಿಸಿದ್ದೆ. ಆದರೆ ಅರಣ್ಯ ಇಲಾಖೆಯ ಹಸ್ತಕ್ಷೇಪದಿಂದ ಕಾಮಗಾರಿ ಕುಂಠಿತಗೊಂಡಿತು. ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಎಲ್ಲೇ ಆಗಲಿ, ಬಡವರು ಮನೆ ನಿರ್ಮಿಸಲು ಮುಂದಾದರೆ ಅರಣ್ಯ ಇಲಾಖೆಯವರು ಇಲ್ಲಸಲ್ಲದ ನೆಪವೊಡ್ಡಿ ಅಡ್ಡಿಪಡಿಸಬಾರದು ಎಂದು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಆದರೂ ಶಾಸಕ ಕಾಮತ್ ಈ ಬಗ್ಗೆ ಆಸಕ್ತಿ ವಹಿಸಿ ಕೆಲಸ ಮಾಡುತ್ತಿಲ್ಲ, ಹೇಗೆ ಕೆಲಸ ಮಾಡಬೇಕು ಅವರಿಗೆ ಗೊತ್ತೂ ಇಲ್ಲ. ಅದರ ಬದಲು ನನ್ನ ವಿರುದ್ಧ ಟೀಕೆ ಮಾಡಿ ಮತದಾರರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಂಜೂರುಗೊಂಡ ಯೋಜನೆಯ ಕಾಮಗಾರಿಯನ್ನು ಈಗ ಕೈಗೆತ್ತಿಕೊಳ್ಳಲಾಗುತ್ತಿದೆ. ಅಲ್ಲದೆ ಅಲ್ಲೆಲ್ಲಾ ಬ್ಯಾನರ್, ಫ್ಲೆಕ್ಸ್ ಹಾಕಿ ತಾನೇ ಯೋಜನೆ ಜಾರಿಗೊಳಿಸಿದ್ದು ಎಂದು ಬಿಂಬಿಸುತ್ತಿದ್ದಾರೆ. ಶಾಸಕನಾಗಿ ಸುಮಾರು 2 ವರ್ಷವಾಗುತ್ತಾ ಬಂದರೂ ಅವರಿಗೆ ಹೊಸ ಯೋಜನೆ ಮಂಜೂರು ಮಾಡಿಸಲು ಸಾಧ್ಯವಾಗಿಲ್ಲ. ಆ ಯೋಗ್ಯತೆಯೂ ಅವರಿಗೆ ಇಲ್ಲ. ರೀತಿ-ನೀತಿ ಗೊತ್ತಿಲ್ಲದ ಕಾಮತ್ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅವರ ಶಾಸಕತ್ವದ ಅವಧಿಯಲ್ಲಿ ಏನೇನು ಮಾಡಿದ್ದಾರೆ ಎಂದು ದಾಖಲೆ ಸಮೇತ ಬಂದರೆ ಚರ್ಚೆಗೂ ಸಿದ್ಧ ಎಂದು ಜೆ.ಆರ್.ಲೋಬೋ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಎನ್.ಎಸ್.ಕರೀಂ, ಖಾಲಿದ್ ಉಜಿರೆ, ಜಯಶೀಲ ಅಡ್ಯಂತಾಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News