ಬಿಜೆಪಿಯ ಭಾವನಾತ್ಮಕ ಮಾತುಗಳಿಗೆ ಕಿವಿಗೊಡದಿರಿ: ಮಂಗಳೂರಿನ ಮತದಾರರಿಗೆ ಸೊರಕೆ ಕರೆ

Update: 2019-11-08 07:03 GMT

ಮಂಗಳೂರು, ನ.8: ಬಿಜೆಪಿಗರಿಗೆ ಅಭಿವೃದ್ಧಿ ಮುಖ್ಯವಲ್ಲ. ಅಧಿಕಾರಕ್ಕಾಗಿ ಅವರು ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಟ್ಟು ಸವಾಜದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಹಾಗಾಗಿ ಮಂಗಳೂರು ಮನಪಾಕ್ಕೆ ನ.12ರಂದು ನಡೆಯುವ ಚುನಾವಣೆಯಲ್ಲಿ ಮತದಾರರು ಬಿಜೆಪಿಯ ಭಾವನಾತ್ಮಕ ಮಾತುಗಳಿಗೆ ಕಿವಿಗೊಡದೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮಾಜಿ ಸಂಸದ ವಿನಯ ಕುಮಾರ್ ಸೊರಕೆ ಕರೆ ನೀಡಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು ಕಾಂಗ್ರೆಸ್ ಅಭಿವೃದ್ಧಿ ಮುಂದಿಟ್ಟುಕೊಂಡೇ ಮತ ಯಾಚಿಸುತ್ತಿದೆ. ಆದರೆ, ಬಿಜೆಪಿಗರಿಗೆ ಅಭಿವೃದ್ಧಿ, ಸತ್ಯಾಂ, ವಾಸ್ತವ ಬೇಕಾಗಿಲ್ಲ. ಮಂಗಳೂರು ಇಷ್ಟೊಂದು ಅಭಿವೃದ್ಧಿ ಕಂಡಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಂಗಳೂರಿನ ಅಭಿವೃದ್ಧಿಗೆ 5,465 ಕೋ.ರೂ. ವ್ಯಯಿಸಲಾಗಿದೆ. ಆದರೆ ಬಿಜೆಪಿಗರಿಗೆ ಅಭಿವೃದ್ಧಿ ಬೇಕಿಲ್ಲ. ಮಂಗಳೂರಿಗೆ ಕುಡಿಯುವ ನೀರು ಪೂರೈಕೆ, ಎಡಿಬಿ ಯೋಜನೆ, ಸ್ಮಾರ್ಟ್‌ಸಿಟಿ, ಕಾಂಕ್ರಿಟ್ ರಸ್ತೆಗಳ ನಿರ್ಮಾಣ ಇತ್ಯಾದಿ ಮಾಡಿದ್ದೇ ಕಾಂಗ್ರೆಸ್ ಪಕ್ಷವಾಗಿದೆ. ಬಿಜೆಪಿಯ ಆಡಳಿತಾವಧಿಯಲ್ಲಿ ನಡೆದ ಬಹುತೇಕ ಯುವತಿತರ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಕೂಡಾ ಬಿಜೆಪಿಗರು ಮುಂಚೂಣಿಯಲ್ಲಿದ್ದಾರೆ. ಬಿಜೆಪಿ ಅವಧಿಯಲ್ಲಾದ ನೋಟ್ ಬ್ಯಾನ್, ಜಿಎಸ್‌ಟಿಯಿಂದ ದೇಶದ ಆರ್ಥಿಕ ಕುಸಿತವೂ ಕಂಡಿದೆ. ಇದನ್ನೆಲ್ಲಾ ಮರೆ ಮಾಚಲು ಭಾವನಾತ್ಮಕ ವಿಚಾರವೇ ಬಿಜೆಪಿಗರಿಗೆ ಅಸ್ತ್ರವಾಗಿದೆ. ಇದನ್ನು ಮತದಾರರು ಮನಗಾಣಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಐವನ್ ಡಿಸೋಜ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಎನ್.ಎಸ್. ಕರೀಂ, ಶುಭೋದಯ ಆಳ್ವ, ಖಾಲಿದ್ ಉಜಿರೆ, ಜಯಶೀಲ ಅಡ್ಯಂತಾಯ, ನಝೀರ್ ಬಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News