ಮುಹಮ್ಮದ್ ಗುಂಡಿಕುಮೇರಿಗೆ ಈ ಬಾರಿಯ ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ

Update: 2019-11-08 10:58 GMT

ಮಂಗಳೂರು: ಯುನಿವೆಫ್ ಕರ್ನಾಟಕ ಪ್ರತಿ ವರ್ಷ ಕೊಡಮಾಡುವ ಪ್ರತಿಷ್ಠಿತ ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿಗೆ ಪ್ರಸಕ್ತ ವರ್ಷ, ಸಮಾಜ ಸೇವಕ, ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ ಗುಂಡಿಕುಮೇರಿನ ಮುಹಮ್ಮದ್ ಯಾನೆ ಅಬ್ಬಾಸ್ ಆಯ್ಕೆಯಾಗಿದ್ದಾರೆ.

ಜವಳಿ ವ್ಯಾಪಾರಿ ದಿ. ಕೆ.ಎಸ್. ಸಯ್ಯದ್ ರ  ಪುತ್ರನಾಗಿರುವ ಮುಹಮ್ಮದ್ ಯಾನೆ ಅಬ್ಬಾಸ್  ಸ್ವತಃ ಪೋಲಿಯೋ ಪೀಡಿತರಾಗಿದ್ದರೂ ಕಳೆದ 20 ವರ್ಷಗಳಿಂದ ಯಾವುದೇ ಸ್ವಾರ್ಥ ಮತ್ತು ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನಾನುರಾಗಿಯಾಗಿದ್ದಾರೆ.

ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಗುಂಡಿಕುಮೇರಿನ ನಿವಾಸಿಯಾಗಿರುವ ಮುಹಮ್ಮದ್ ಈ ಪರಿಸರದ ಎಲ್ಲರಿಗೂ ಚಿರಪರಿಚಿತ. ಇವರಿಂದ ಸಹಾಯ ಪಡೆಯದವರು ಆ ಪ್ರದೇಶದಲ್ಲಿ ಬಹಳ ವಿರಳ.  ಇವರು ಪ್ರಭಲರ ಹಾಗು ರಾಜಕೀಯ ಪ್ರಭಾವಿಗಳ ವಿರೋಧದ ನಡುವೆ ಸರಕಾರದಿಂದ ಬಡ ಒಕ್ಕಲಿಗರಿಗೆ ಹಕ್ಕು ಪತ್ರ ದೊರಕಿಸಿಕೊಡುವ ಮೂಲಕ ಇಲ್ಲಿನ ಸುಮಾರು 25 ಕುಟುಂಬಗಳಿಗೆ ಆಶ್ರಯದಾತರಾಗಿದ್ದಾರೆ. 

ಅವರು ದ.ಕ. ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಲ್ಲಿಪಾಡಿ ಇದರ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ  ಕರಿಯಂಗಳದ ನೂರುಲ್ ಇಸ್ಲಾಮ್ ಜುಮಾ ಮಸೀದಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಯುನಿವೆಫ್ ಕರ್ನಾಟಕ  2019 ರ ಸಾಲಿನ ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿಯನ್ನು ನೀಡಿ ಗೌರವಿಸಲು ತೀರ್ಮಾನಿಸಿದೆ. 

ಪ್ರಶಸ್ತಿಯು  5000 ರೂ. ನಗದು ಹಾಗೂ ಸನ್ಮಾನ ಪತ್ರ ಒಳಗೊಂಡಿದೆ. ನ. 9 ರಂದು ಮಗ್ರಿಬ್ ನಮಾಝ್ ಬಳಿಕ ಗುಂಡಿಕುಮೇರಿ ಕರಿಯಂಗಳ  ನೂರುಲ್ ಹುದಾ ಜುಮಾ ಮಸೀದಿ ವಠಾರದಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು.

ಮಸೀದಿ ಅಧ್ಯಕ್ಷ ಮುಹಮ್ಮದ್ ಬಶೀರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅಧ್ಯಕತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News