‘ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್-2019’ ಉದ್ಘಾಟನೆ
ಮಂಗಳೂರು, ನ.8: ಇನ್ಸ್‌ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲೈಡ್ ಆರ್ಟ್ಸ್‌ನ ಪಡುಬಿದ್ರಿ ಶಾಖೆಯ ನೇತೃತ್ವದಲ್ಲಿ ಕ್ರೀಡಾ ಭಾರತಿ ಮಂಗಳೂರು ಮತ್ತು ಫಲಾಹ್ ಎಜುಕೇಶನ್ ಸೊಸೈಟಿ ತಲಪಾಡಿ ಇದರ ಸಹಭಾಗಿತ್ವದಲ್ಲಿ ನಗರದ ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಲಾದ ಮೂರು ದಿನಗಳ 37ನೇ ಬುಡೋಕಾನ್ ಕರಾಟೆ ಡೋ ಇಂಡಿಯಾ ‘ನ್ಯಾಷನಲ್ ಕರಾಟೆ ಚಾಂಪಿಯನ್‌ಶಿಪ್-2019’ನ್ನು ಶುಕ್ರವಾರ ಚಿತ್ರನಟ, ಬುಡೋಕಾನ್ ಕರಾಟೆ ಡೋ ಇಂಡಿಯಾದ ಮುಖ್ಯಸ್ಥ ಸುಮನ್ ತಳ್ವಾರ್ ಶುಕ್ರವಾರ ಉದ್ಘಾಟಿಸಿದರು.
ಈ ಸ್ಪರ್ಧೆಯಲ್ಲಿ 20 ರಾಜ್ಯಗಳ ಸುಮಾರು 1,800 ಕರಾಟೆಪಟುಗಳು ಪಾಲ್ಗೊಂಡಿದ್ದಾರೆ.
ಬಳಿಕ ಮಾತನಾಡಿದ ಅವರು ಕರಾಟೆ ಇತರ ಎಲ್ಲಾ ಕ್ರೀಡೆಗಳಿಗಿಂತ ಹೆಚ್ಚು ಕೌಶಲ ಮತ್ತು ಸಾಹಸಮಯವಾದುದು. ಇದರಲ್ಲಿ ಸಾಧನೆ ಮಾಡಬೇಕಾದರೆ ಹೆಚ್ಚಿನ ಶ್ರಮಬೇಕು. ಕರಾಟೆಯನ್ನು ಗಂಭೀರವಾಗಿ ಸ್ವೀಕರಿಸಿದರೆ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯವಿದೆ ಎಂದು ಹೇಳಿದರು.
ಕರಾಟೆ ಕೇವಲ ಕ್ರೀಡೆಗೆ ಸೀಮಿತವಲ್ಲ. ಅದು ಉತ್ತಮ ವ್ಯಕ್ತಿತ್ವ ರೂಪಿಸಲು ಕೂಡ ಸಹಕಾರಿಯಾಗಿದೆ. ಕರಾಟೆ ಪಟುಗಳಾದರವಲ್ಲಿ ಬಹುತೇಕ ಮಂದಿ ಜೀವನದಲ್ಲಿ ಸಾಧನೆ ಮಾಡಿದ್ದಾರೆ.ಬುಡೋಕಾನ್ ಕರಾಟೆ ಸಂಸ್ಥೆಯು ದೇಶದ ನಗರ ಮಾತ್ರವಲ್ಲದೆ ಗ್ರಾಮೀಣ ಭಾಗಗಳಲ್ಲಿಯೂ ಕರಾಟೆ ಚಟುವಟಿಕೆಗಳನ್ನು ಹಮ್ಮಿಕೊಂಡು ಕರಾಟೆಪಟುಗಳನ್ನು ತಯಾರುಗೊಳಿಸುತ್ತಿದೆ ಎಂದು ಬುಡೋಕಾನ್ ಕರಾಟೆ ಡೋ-ಇಂಡಿಯಾದ ಅಧ್ಯಕ್ಷ ಸಿ.ಹನುಮಂತ ರಾವ್ ಹೇಳಿದರು.
ಕ್ರೀಡಾಭಾರತಿಯ ಕ್ಷೇತ್ರೀಯ ಸಂಯೋಜಕ ಚಂದ್ರಶೇಖರ ಜಹಗೀರ್‌ದಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ, ಕ್ರೀಡಾ ಭಾರತಿಯ ಗೌರವಾಧ್ಯಕ್ಷ ನಾಗರಾಜ್ ಶೆಟ್ಟಿ, ಅಧ್ಯಕ್ಷ ಕರಿಯಪ್ಪ ರೈ, ಸಂಯೋಜಕ ಭೋಜರಾಜ ಕಲ್ಲಡ್ಕ, ಆರ್‌ಎಸ್‌ಎಸ್ ಸಹ ಪ್ರಾಂತೀಯ ಸಂಘಚಾಲಕ್ ಡಾ. ಪಿ.ವಾಮನ್ ಶೆಣೈ, ಫಲಾಹ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಎನ್.ಅರಬಿ ಕುಂಞಿ, ಬುಡೋಕಾನ್ ಕರಾಟೆ ಡೋ-ಇಂಡಿಯಾದ ಕಾರ್ಯದರ್ಶಿ ಪ್ರವೀಣ್ ಕುಮಾರ್, ಸಲಹೆಗಾರ ಸೈಯದ್ ಅಹ್ಮದ್, ಸ್ತ್ರೀ ತಜ್ಞೆ ಡಾ. ರಾಜಲಕ್ಷ್ಮೀ, ಡಾ. ಸತೀಶ್ ರಾವ್, ಅಬ್ಬಾಸ್ ಮಜಲ್, ಯು.ಬಿ.ಮುಹಮ್ಮದ್, ಸೇವಂತಿ ಮತ್ತಿತರರು ಪಾಲ್ಗೊಂಡಿದ್ದರು.
ಮುಖ್ಯ ಆಯೋಜಕ ಶಿಹಾನ್ ಅಬ್ದುಲ್ ಖಾದರ್ ಹುಸೇನ್ ಸ್ವಾಗತಿಸಿದರು. ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಭಾರತಿಯ ಕಾರ್ಯದರ್ಶಿ ಹರೀಶ್ ರೈ ವಂದಿಸಿದರು.