ಬೈಕಂಪಾಡಿಯಲ್ಲಿ ಟಯರ್ ಕಳವು ಪ್ರಕರಣ: ಮೂವರ ಬಂಧನ

Update: 2019-11-08 15:12 GMT

ಮಂಗಳೂರು, ನ. 8: ಬೈಕಂಪಾಡಿ ಕೈಗಾರಿಕಾ ಪ್ರದೇಶದ ಟಯರ್ ರೀಸೊಲ್ ಕಾರ್ಖಾನೆಯಿಂದ ಟಯರ್ ಕಳವು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪಣಂಬೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಸೂರಿಂಜೆ ಬೋರ್‌ಕಟ್ಟೆ ನಿವಾಸಿ ಸಂತೋಷ (30), ಕಾಟಿಪಳ್ಳ ನಿವಾಸಿ ರಿಯಾಝ್ ಅಹ್ಮದ್(32), ಸೂರಿಂಜೆ ನಿವಾಸಿ ಮುಹಮ್ಮದ್ ಅಲಿ ಯಾನೆ ಅಬ್ಬಾಸ್ (33) ಬಂಧಿತ ಆರೋಪಿಗಳು.

ಬೈಂಕಪಾಡಿ ಪಂಚಲಿಂಗೇಶ್ವರ ಟಯರ್ಸ್‌ನಲ್ಲಿದ್ದ ಲಾರಿ ಮತ್ತು ಬಸ್‌ಗಳಿಗೆ ಸಂಬಂಧಿಸಿದ 20 ರಿಸೋಲ್ ಟಯರ್, ಒಂದು ಕಟ್ಟಿಂಗ್ ಮೆಷಿನ್ ಕಳವು ಮಾಡಿದ್ದಾರೆ. ಈ ಪ್ರಕರಣದಲ್ಲಿ ಕಳವಾದ ಸೊತ್ತುಗಳ ಸಹಿತ 5 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಆರೋಪಿಗಳಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.

ಪ್ರಕರಣ ವಿವರ: ಟಯರ್ಸ್ ರಿಸೋಲ್ ಸಂಸ್ಥೆಯ ಮಾಲಕ ಹರೀಶ್ ಕುಮಾರ್ ಅ.26ರಂದು ಮುಂಬೈಗೆ ತೆರಳಿದ್ದರು. ಈ ಸಮಯ ಕಾರ್ಖಾನೆಯನ್ನು ನೋಡಿಕೊಳ್ಳಲು ಸಂಸ್ಥೆಯ ಕೆಲಸದವರಾದ ವಿಠಲ್ ಅವರಿಗೆ ತಿಳಿಸಿದ್ದರು. ಅ.28ರಂದು ಟಯರ್‌ಗಳು ಕಳವಾಗಿತ್ತು.

ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್. ಹರ್ಷಾ ನಿರ್ದೇಶನದಂತೆ ಡಿಸಿಪಿಗಳಾದ ಅರುಣಾಂಶುಗಿರಿ, ಲಕ್ಷ್ಮೀಗಣೇಶ್, ಎಸಿಪಿ ಶ್ರೀನಿವಾಸ ಗೌಡ ಪಣಂಬೂರು ಪೊಲೀಸ್ ಠಾಣಾ ನಿರೀಕ್ಷಕ ಅಝ್ಮತ್ ಅಲಿ, ಉಪನಿರೀಕ್ಷಕರಾದ ಉಮೇಶ್ ಕುಮಾರ್ ಎಂ.ಎನ್., ಕುಮಾರೇಶನ್, ಎಎಸ್ಸೈ ಗಿರೀಶ್, ಸಿಬ್ಬಂದಿ ಪ್ರೇಮಾನಂದ, ಡೇವಿಡ್ ಡಿಸೋಜ, ಪ್ರಮೋದ್, ಜಯರಾಮ್, ಕಮಲಾಕ್ಷ, ವೆಂಕಟೇಶ, ದಾದಾಸಾಬ್ ಆರೋಪಿಗಳನ್ನು ಸೊತ್ತು ಸಮೇತ ಪತ್ತೆ ಹಚ್ಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News