ಮಂಗಳೂರು: ವಿಕಾಸ್ ಕಾಲೇಜ್ ನಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ

Update: 2019-11-08 15:25 GMT

ಮಂಗಳೂರು: ನಗರದ ವಿಕಾಸ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶುಕ್ರವಾರ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ನಡೆಯಿತು.

ಮುಖ್ಯ ಅತಿಥಿಗಳಾಗಿ ಸೈಂಟ್ ಅಲೋಸಿಯಸ್ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲರಾದ ಪ್ರೊ. ರೊನಾಲ್ಡ್ ಪಿಂಟೊ ಅವರು ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡುತ್ತ, ವಿದ್ಯಾರ್ಥಿಗಳಿಗೆ ನಿರ್ದಿಷ್ಟವಾದ ಗುರಿ ಇರಬೇಕು ಹಾಗೂ ತಮ್ಮಲ್ಲಿ ಇರುವ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಂಡು ಗುರಿ ಸಾಧಿಸಬೇಕು. ಕೇವಲ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣದಿಂದ ಮಾತ್ರವಲ್ಲ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಮುಂದಿನ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣಬಹುದು ಎಂದರು.

ವಿಕಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುನೀಲ್ ಬಿ ಎಮ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಿಯುಸಿ ನಂತರದ ಶಿಕ್ಷಣದ ಸಂಪೂರ್ಣ ಮಾಹಿತಿಯ ಹಾಗೂ ಮಾರ್ಗದರ್ಶನದ ಕೊರತೆಯಿಂದ ವಿದ್ಯಾರ್ಥಿಗಳು ತೊಂದರೆಗೊಳಗಾಗುತ್ತಿದ್ದು, ವೃತ್ತಿ ಮಾರ್ಗದರ್ಶನದ ಕಾರ್ಯಾಗಾರವು ಅವರಿಗೆ ಸಹಕಾರಿಯಾಗಲಿದೆ ಎಂದರು.

ವೇದಿಕೆಯಲ್ಲಿ ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯ ಸಮನ್ವಯಾಧಿಕಾರಿ ಪಾರ್ಥ ಸಾರಥಿ ಪಾಲೆಮಾರ್, ಡೀನ್ ಡಾ. ಮಂಜುಳಾ ರಾವ್, ಶೈಕ್ಷಣಿಕ ನಿರ್ದೇಶಕರಾದ ಪ್ರೊ. ಟಿ ರಾಜಾರಾಮ್ ರಾವ್, ವಿಕಾಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಐಶ್ವರ್ಯ ಕೆ  ಉಪಸ್ಥಿತರಿದ್ದರು.

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಸೈಂಟ್ ಅಲೋಶಿಯಸ್ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲರಾದ ಪ್ರೊ. ರೊನಾಲ್ಡ್ ಪಿಂಟೊ ಅವರು ಬಿಎಸ್ಸಿ ಹಾಗೂ ಎಮ್ ಎಸ್ಸಿ ಪದವಿ ಶಿಕ್ಷಣ, ಸರಕಾರಿ ಕೆಲಸಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು, ಸಿಎಲ್‍ಎಟಿ, ಇಂಟೀರಿಯರ್ ಮತ್ತು ಫ್ಯಾಶನ್ ಡಿಸೈನಿಂಗ್ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಅಭಿಜ್ಞಾ ಎಜ್ಯುಕೇಷನ್ ಪ್ರೈವೇಟ್ ಲಿಮಿಟೆಡ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಅಭಿಲಾಷ್ ಕೆ ಅವರು ಇಂಜಿನಿಯರಿಂಗ್ ಮತ್ತು ನಾಟಾ ಪರೀಕ್ಷೆಗಳ ಬಗ್ಗೆ  ಮಾಹಿತಿಯನ್ನು ನೀಡಿದರು. ಡಾ. ಗುರುತೇಜ್  ಗ್ಲೋಬಲ್ ಕೆರಿಯರ್ ವಿಷಯದ ಬಗ್ಗೆ ಮಾತನಾಡಿದರು. ಡಾ. ಶಿವಕುಮಾರ್ ಮಗಧ  ಕೃಷಿ ಕ್ಷೇತ್ರ ಹಾಗೂ ಕೃಷಿ ಸಂಬಂಧಿತ ಇನ್ನಿತರ ಕ್ಷೇತ್ರಗಳಲ್ಲಿ ವಿದ್ಯಾಭ್ಯಾಸ ಹಾಗೂ ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಕಮ್ಯುನಿಟಿ ಮೆಡಿಸಿನ್ ಪ್ರೊ. ಮತ್ತು  ಅಸೋಸಿಯೇಟ್ ಡೀನ್ ಡಾ. ಉನ್ನಿಕೃಷ್ಣನ್ ವೈದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು. ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರು, ಪ್ರೊ. ಹಾಗೂ ಆರ್ಗನನ್ ಮೆಡಿಸಿನ್ ಮತ್ತು ಹೋಮಿಯೋಪಥಿಕ್ ಫಿಲೋಸಫಿ ವಿಭಾಗದ ಮುಖ್ಯಸ್ಥ ಡಾ. ಶಿವಪ್ರಸಾದ್ ಆಯುಷ್ ಹಾಗೂ ಹೋಮಿಯೋಪಥಿ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು.

ಫಿಸಿಯೋಥೆರಪಿ ಶಿಕ್ಷಣದ ಬಗ್ಗೆ ವಿಕಾಸ್ ಫಿಸಿಯೋಥೆರಪಿ ಕಾಲೇಜಿನ ಅಸಿಸ್ಟೆಂಟ್ ಪ್ರೊ. ಡಾ. ಸಂಜ್ಯೋತ್ ಎಚ್ ಎಸ್  ಮಾರ್ಗದರ್ಶನ ನೀಡಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ನಡೆದ ಕಾರ್ಯಾಗಾರದಲ್ಲಿ ಅಭಿಲಾಷ್ ಕೆ ಮಾತನಾಡಿದರು. ಪ್ರೊ. ರೊನಾಲ್ಡ್ ಪಿಂಟೋ ಮಾತನಾಡಿ ಬಿ ಕಾಂ ಮತ್ತು ಎಮ್ ಕಾಂ ಪದವಿ ಶಿಕ್ಷಣ, ಸರಕಾರಿ ಕೆಲಸಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು, ಸಿಎಲ್‍ಎಟಿ, ಇಂಟೀರಿಯರ್ ಮತ್ತು ಫ್ಯಾಶನ್ ಡಿಸೈನಿಂಗ್ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಡಾ. ಗುರುತೇಜ್ ಗ್ಲೋಬಲ್ ಕೆರಿಯರ್ ವಿಷಯದ ಬಗ್ಗೆ ಮಾತನಾಡಿದರು. ಸಿ ಎ ವಿಂದ್ಯಾ ವಿ ಹೆಗ್ಡೆ ಚಾರ್ಟರ್ಡ್ ಅಕೌಟೆಂಟ್ ಶಿಕ್ಷಣ ಮತ್ತು ವೃತ್ತಿ ಜೀವನದ ಬಗ್ಗೆ  ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ರಶ್ಮಿ ಏವಿಯೇಶನ್ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು. ಒತ್ತಡ ನಿರ್ವಹಣೆ, ಸಮಯ ನಿರ್ವಹಣೆ ಮತ್ತು ನಾಯಕತ್ವ ಅಭಿವೃದ್ಧಿ ವಿಷಯಗಳ ಕುರಿತು ಸೆಡ್ರಿಕ್ ಕುಟಿನ್ಹೋ ಮಾರ್ಗದರ್ಶನವನ್ನು ನೀಡಿದರು.

ಉಪನ್ಯಾಸಕಿಯರಾದ ಶ್ರುತಿ ಕಿಶೋರ್, ದೀಪಿಕಾ ಶೆಟ್ಟಿ, ರಕ್ಷಿತಾ ಎಸ್ ಉಚ್ಚಿಲ್ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News