ಇಬ್ಬರದೂ ತಪ್ಪಿದೆ: ವಕೀಲರು, ಪೊಲೀಸರ ವರ್ತನೆಗೆ ಸುಪ್ರೀಂ ಟೀಕೆ

Update: 2019-11-08 15:43 GMT

ಹೊಸದಿಲ್ಲಿ, ನ.8: ನವೆಂಬರ್ 2ರಂದು ಹೊಸದಿಲ್ಲಿಯ ತೀಸ್ ಹಝಾರಿ ಕೋರ್ಟ್‌ನ ಹೊರಗಡೆ ನಡೆದ ಘರ್ಷಣೆ ಪ್ರಕರಣದಲ್ಲಿ ವಕೀಲರು ಹಾಗೂ ಪೊಲೀಸರ ವರ್ತನೆಯನ್ನು ಸುಪ್ರೀಂಕೋರ್ಟ್ ಟೀಕಿಸಿದೆ.

ಯಾರು ಕೂಡಾ ಒಂದೇ ಕೈಯಲ್ಲಿ ಚಪ್ಪಾಳೆ ಹೊಡೆಯಲು ಆಗುವುದಿಲ್ಲ. ಎರಡೂ ಕಡೆಯಿಂದ ಸಮಸ್ಯೆಯಾಗಿದೆ. ಇದಕ್ಕಿಂತ ಹೆಚ್ಚು ಹೇಳಲು ಬಯಸುವುದಿಲ್ಲ. ಕಾರಣವಿದ್ದೇ ನಾವು ಮೌನವಾಗಿದ್ದೇವೆ. ನಾವು ಒಂದು ನಿರ್ದಿಷ್ಟ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದೇವೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅಲ್ಲದೆ ಪೊಲೀಸರು ತಮ್ಮ ವಿರುದ್ಧ ದೌರ್ಜನ್ಯ ಎಸಗಿದ್ದಾರೆ ಎಂಬ ವಕೀಲರ ವಾದಕ್ಕೆ ಅಸಮ್ಮತಿ ಸೂಚಿಸಿದೆ.

 ಒಡಿಶಾದಲ್ಲಿ ವಕೀಲರ ಮುಷ್ಕರಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ಸಂದರ್ಭ ಸುಪ್ರೀಂಕೋರ್ಟ್ ಈ ಹೇಳಿಕೆ ನೀಡಿದೆ. ವಿಚಾರಣೆ ಸಂದರ್ಭ ದಿಲ್ಲಿಯಲ್ಲಿ ನಡೆದ ಪೊಲೀಸ್-ವಕೀಲರ ನಡುವಿನ ಘರ್ಷಣೆಯನ್ನು ಪ್ರಸ್ತಾವಿಸಿದ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಮನನ್ ಮಿಶ್ರಾ, ಈ ವಿವಾದ ಎರಡು ದಿನದೊಳಗೆ ಪರಿಹಾರವಾಗುತ್ತದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್, ಈ ಪ್ರಕರಣದಲ್ಲಿ ಇಬ್ಬರ ಕಡೆಯಿಂದಲೂ ಸಮಸ್ಯೆಯಾಗಿದೆ. ಒಂದೇ ಕೈಯಿಂದ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ ಎಂದು ತಿಳಿಸಿತು.

ಈ ಮಧ್ಯೆ, ನವೆಂಬರ್ 2ರಂದು ತೀಸ್‌ಹಝಾರಿ ಕೋರ್ಟ್‌ನಲ್ಲಿ ನಡೆದ ಘರ್ಷಣೆ ಸಂದರ್ಭ ಉತ್ತರ ದಿಲ್ಲಿಯ ಡಿಸಿಪಿ ಮೋನಿಕಾ ಚೌಧರಿಯನ್ನು ಕೆಲವು ವ್ಯಕ್ತಿಗಳು ಬೆನ್ನಟ್ಟಿ ಓಡಿಸುತ್ತಿರುವ ಸಿಸಿಟಿವಿ ದೃಶ್ಯಾವಳಿ ಗುರುವಾರ ಹೊರಬಿದ್ದಿದ್ದು ಡಿಸಿಪಿಯ ಜತೆಗಿದ್ದ ಪೊಲೀಸ್ ಸಿಬ್ಬಂದಿ ಮೇಲೆಯೂ ಈ ವ್ಯಕ್ತಿಗಳು ಕೈಮಾಡಿರುವ ದೃಶ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News