ಮಂಗಳೂರು: ವಿಚಾರಣಾಧೀನ ಕೈದಿ ಪರಾರಿ

Update: 2019-11-08 15:44 GMT

ಮಂಗಳೂರು, ನ. 8: ನ್ಯಾಯಾಲಯಕ್ಕೆ ಹಾಜರುಪಡಿಸಿ ಉಪಕಾರಾಗೃಹಕ್ಕೆ ಕರೆ ತರುತ್ತಿದ್ದ ಸಂದರ್ಭ ವಿಚಾರಣಾಧೀನ ಕೈದಿಯೋರ್ವ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಗೂಡಿನಬಳಿಯ ನಿವಾಸಿ ಮುಹಮ್ಮದ್ ರಫೀಕ್ (28) ಪರಾರಿಯಾದ ಆರೋಪಿ. ಈತನ ವಿರುದ್ಧ ಸರ ಕಳ್ಳತನ, ದರೋಡೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ಮುಹಮ್ಮದ್ ರಫೀಕ್‌ ವಿರುದ್ಧದ ಪ್ರಕರಣ ಬೆಳ್ತಂಗಡಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಇಬ್ಬರು ಪೊಲೀಸರು ಆತನನ್ನು ಬಸ್ ಮೂಲಕ ಕರೆದೊಯ್ದು, ವಿಚಾರಣೆ ಮುಗಿಸಿ ಮಂಗಳೂರಿಗೆ ಬಂದಿದ್ದರು. ಪಿವಿಎಸ್ ವೃತ್ತದ ಬಳಿ ಬಸ್‌ನಿಂದ ಇಳಿದು ಉಪಕಾರಾಗೃಹದತ್ತ ನಡೆದುಕೊಂಡು ಬರುತ್ತಿದ್ದಾಗ ಕಾಂಪ್ಲೆಕ್ಸ್‌ವೊಂದರ ಎದುರು ಪೊಲೀಸರನ್ನು ತಳ್ಳಿ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೂರ್ವ ಯೋಜಿತ: ಮುಹಮ್ಮದ್ ರಫೀಕ್ ಪೊಲೀಸರಿಂದ ತಪ್ಪಿಸಿಕೊಂಡು ಹೋಗಲು ಮೊದಲೇ ನಿರ್ಧರಿಸಿದ್ದ. ಇದಕ್ಕಾಗಿ ಬೈಕ್ ವ್ಯವಸ್ಥೆ ಮಾಡಿಕೊಂಡಿದ್ದ. ಪೊಲೀಸರೊಂದಿಗೆ ಉಪಕಾರಾಗೃಹದ ಗೇಟ್ ಎದುರು ತಲುಪುತ್ತಿದ್ದಂತೆ ಎದುರಿನಿಂದ ಯುವಕನೋರ್ವ ಬೈಕ್ ಚಲಾಯಿಸಿಕೊಂಡು ಬಂದಿದ್ದಾನೆ. ರಫೀಕ್‌ನ ಕೈಗೆ ಅಳವಡಿಸಿದ ಕೋಳವನ್ನು ಜತೆಗಿದ್ದ ಪೊಲೀಸರು ಕಾರಾಗೃಹದ ಹತ್ತಿರ ಬಂದಾಯಿತು. ಇನ್ನೆಲ್ಲಿಗೂ ಓಡಿ ಹೋಗಲಾರನೆಂದು ಕೋಳ ಹಿಡಿದುಕೊಂಡಿರಲಿಲ್ಲ. ಈ ಸಮಯವನ್ನು ಸದುಪಯೋಗಪಡಿಸಿಕೊಂಡ ರಫೀಕ್ ತಕ್ಷಣ ಎದುರಿನಿಂದ ಬಂದ ಬೈಕ್‌ನಲ್ಲಿ ಕುಳಿತು ಪರಾರಿಯಾಗಿದ್ದಾನೆ.
ಇದರಿಂದ ಗಾಬರಿಗೊಂಡ ಪೊಲೀಸರು ಆತನ ಹಿಂದಿನಿಂದಲೇ ಓಡಿಕೊಂಡು ಬಂದಿದ್ದಾರೆ. ಪಿವಿಎಸ್ ವೃತ್ತದಲ್ಲಿ ವಾಹನ ದಟ್ಟಣೆ ಇದ್ದುದರಿಂದ ಸಿಗ್ನಲ್‌ನಲ್ಲಿ ನಿಂತಿದ್ದ ಬೈಕೊಂದರಲ್ಲಿ ಓರ್ವ ಪೊಲೀಸ್ ಬಂಟ್ಸ್ ಹಾಸ್ಟೆಲ್ ಕಡೆಗೆ ಬೆನ್ನಟ್ಟಿ ಹೋಗಿದ್ದಾರೆ. ಪೊಲೀಸರು ಈತನ ಪತ್ತೆಗೆ ಎಲ್ಲೆಡೆ ಕಾರ್ಯಾಚರಣೆ ಮುಂದುವರಿಸಿದ್ದು, ರಾತ್ರಿ ತನಕ ಪತ್ತೆಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News