ಬೀಚ್ ಸ್ವಚ್ಛತಾ ಅಭಿಯಾಕ್ಕೆ ಒಂದು ಸಾವಿರ ಜನರ ಗುರಿ: ಉಡುಪಿ ಜಿಲ್ಲಾಧಿಕಾರಿ

Update: 2019-11-08 15:51 GMT

ಉಡುಪಿ, ನ.8: ಸ್ವಚ್ಛ ಭಾರತ ಆಂದೋಲನದಡಿ ನ.12ರಂದು ಮಲ್ಪೆ- ಪಡುಕೆರೆ ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಕನಿಷ್ಠ ಒಂದು ಸಾವಿರ ಸ್ವಚ್ಛತಾ ಕಾರ್ಯಕರ್ತರನ್ನು ಸೇರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಜಿಲ್ಲಾ ಮಟ್ಟದ ವಿವಿಧ ಇಲಾಖೆಗ ಅಧಿಕಾರಿ ಗಳಿಗೆ ಸೂಚನೆ ನೀಡಿದ್ದಾರೆ.

ಶುಕ್ರವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೀಚ್ ಸ್ವಚ್ಛತಾ ಅಭಿಯಾನದ ಪೂರ್ವಬಾವಿ ಸಭೆಯಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾ ಡಿದ ಅವರು, ಎಲ್ಲಾ ಇಲಾಖೆಗಳ ಜವಾಬ್ದಾರಿಯನ್ನು ವಿವರಿಸಿದರು.

ಮಲ್ಪೆ ಮತ್ತು ಪಡುಕೆರೆ ಬೀಚ್‌ನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮದಲ್ಲಿ ಉಡುಪಿಯ ಮೂರು ನಸಿರ್ಂಗ್ ಕಾಲೇಜು, ಮೂರು ಪದವಿ ಪೂರ್ವ ಕಾಲೇಜು, ಯುವಕ ಮತ್ತು ಭಜನಾ ಮಂಡಳಿ, ಸ್ವಚ್ಛತಾ ಗುಂಪುಗಳು, ಎನ್ನೆಸ್ಸೆಸ್, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಕಾರ್ಯಕರ್ತರು ಸೇರಿದಂತೆ ಕನಿಷ್ಠ ಒಂದು ಸಾವಿರ ಜನರನ್ನು ಒಟ್ಟುಗೂಡಿಸುವಂತೆ ಸೂಚಿಸಿದರು.

ಮಲ್ಪೆ ಬೀಚ್ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯುವ ದಿನ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡರು ಖುದ್ದು ಹಾಜರಿರುತ್ತಾರೆ. ಅಂದಿನ ಎಲ್ಲಾ ಕಾರ್ಯಕ್ರಮಗಳನ್ನು ಸಂಯೋಜಿಸುವ ಜವಾಬ್ದಾರಿ ಹಾಗೂ ಸ್ವಚ್ಛ ಬೀಚ್ ಅಭಿಯಾನದಲ್ಲಿ ಪಾಲ್ಗೊಳ್ಳುವ ಎಲ್ಲಾ ವಿದ್ಯಾರ್ಥಿ ಮತ್ತು ಸಾರ್ವಜನಿಕರಿಗೆ ಟೀ-ಶರ್ಟ್, ಕ್ಯಾಪ್ ಮತ್ತು ಕೈಗವಸು ವಿತರಿಸುವ ಜವಾಬ್ದಾರಿಯನ್ನು ನಗರಸಬೆ ಪೂರೈಸಬೇಕು. ಅಲ್ಲದೇ ಕಾರ್ಯ ಕ್ರಮ ನಡೆಯುವ ಮುಂಚಿನ ಮೂರೂ ದಿನಗಳ ಕಾಲ ಬೆಳಗ್ಗೆ ಮತ್ತು ಸಂಜೆ ಸ್ಥಳದಲ್ಲೆ ಹಾಜರಿದ್ದು ಯಾರೂ ಬಯಲು ಪ್ರದೇಶ ದಲ್ಲಿ ಶೌಚ ಮಾಡದಂತೆ ನೋಡಿಕೊಳ್ಳಬೇಕು ಎಂದು ನಗರಸಭೆಯ ಆಯುಕ್ತರಿಗೆ ಸೂಚೆ ನೀಡಿದರು.

ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಫಲಾಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಶಾಲಾ ಮಕ್ಕಳಿಗೆ ವಾಹನದ ವ್ಯವಸ್ಥೆ, ವಾಹನಗಳ ಪಾರ್ಕಿಂಗ್ ವ್ಯವಸ್ಥೆಗಳೆಲ್ಲವೂ ಸಮರ್ಪಕವಾಗಿದ್ದು, ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬರುವಂತೆ ನೋಡಿಕೊಳ್ಳಬೇಕು. ಸಂಗ್ರಹಿಸಿದ ಕಸವನ್ನು ವಿಲೇವಾರಿ ಮಾಡಲು ಸ್ಥಳದಲ್ಲೇ ಕಸ ಸಾಗಿಸುವ ವಾಹನಗಳು ಮತ್ತು ಪೌರ ಕಾರ್ಮಿಕರನ್ನು ನಿಯುಕ್ತಿಗೊಳಿಸಲು ಸೂಚಿಸಿದರು.

ಮಲ್ಪೆ-ಪಡುಕೆರೆ ಬೀಚ್ ಪ್ರದೇಶದಲ್ಲಿ ಅಭಿಯಾನ ನಡೆಯುವ ದಿನ ಬೀಚ್‌ಗೆ ತೆರಳುವ ಜಾಗದ ಬಳಿ ಬ್ಯಾನರ್‌ಗಳನ್ನು ಅಳವಡಿಸುವಂತೆ, ಬೀಚ್ ಸಂಪೂರ್ಣ ಸ್ವಚ್ಛವಾದ ಬಳಿಕ, ಮರಳು ಶಿಲ್ಪಕಲೆಯ ಅನಾವರಣ ಮಾಡುವಂತೆ, ಕರಾವಳಿಯ ಅತ್ಯಂತ ಸ್ವಚ್ಛ ಹಾಗೂ ರಮಣೀಯ ತಾಣವಾದ ಮಲ್ಪೆ-ಪಡುಕರೆ ಬೀಚ್ ಬಗ್ಗೆ ಮಾಹಿತಿ ನೀಡಲು ಶಾಶ್ವತ ಸೂಚನಾ ಫಲಕಗಳನ್ನು ಅಳವಡಿ ಸುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್, ಕಾಪು ಶಾಸಕ ಲಾಲಾಜಿ ಮೆಂಡನ್, ಯಶಪಾಲ್ ಸುವರ್ಣ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಭಜನಾ ಮಂಡಳಿಗಳ ಅಧ್ಯಕ್ಷರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News