ಮನಪಾ ಕಾಂಗ್ರೆಸ್ ಆಡಳಿತದಲ್ಲಿ ಅವ್ಯವಸ್ಥೆ: ಶಾಸಕ ವೇದವ್ಯಾಸ್

Update: 2019-11-08 15:55 GMT

ಮಂಗಳೂರು, ನ.8: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಳೆದ ಐದು ವರ್ಷದಲ್ಲಿ ಆಸ್ತಿ ತೆರಿಗೆ ಸಹಿತ ಇತರ ಶುಲ್ಕಗಳ ಸಂಗ್ರಹಿಸಲು ನಿರ್ಲಕ್ಷಿಸಲಾಗಿದೆ. ಪರಿಣಾಮ ಪಾಲಿಕೆಯ ಆದಾಯ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ನಗರ ಅಭಿವೃದ್ಧಿ ಕಂಡಿಲ್ಲ. ಪಾಲಿಕೆ ಅವ್ಯವಸ್ಥೆಯ ಆಗರವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮನಪಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆ ಹಾಗೂ ಜಾಹೀರಾತಿನಲ್ಲಿ ತಿಳಿಸಿದ ಯಾವುದೇ ಭರವಸೆ, ವಾಗ್ದಾನಗಳನ್ನು ಈಡೇರಿಸಿಲ್ಲ ಎಂದರು.

ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ತುಂಬೆ ಹೊಸ ವೆಂಟೆಂಡ್ ಡ್ಯಾಂ ನಿರ್ಮಾಣ, ಕೇಬಲ್ ತಂತಿ ರಹಿತ ನಗರ ನಿರ್ಮಿಸಲು ರಾಜ್ಯದಿಂದ 200 ಕೋಟಿ ರೂ. ವಿಶೇಷ ಅನುದಾನ, ಬೃಹತ್ ಕ್ರೀಡಾ ಸಂಕೀರ್ಣ, ರಾಜ್ಯದ ಎರಡನೇ ಐ.ಟಿ. ನಗರವಾಗಿ ಬದಲಿಸುವುದಾಗಿ ಹೇಳಿತ್ತು. ಇವೆಲ್ಲವೂ ಕಾಂಗ್ರೆಸ್ ಮಾಡಿದೆಯೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದ್ದ ಯಾವ ಅಂಶವನ್ನು ಕೂಡ ಕಾಂಗ್ರೆಸ್ ತನ್ನ ಅವಧಿಯಲ್ಲಿ ಮಾಡಿಲ್ಲ ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವುದಿಲ್ಲ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ತಕ್ಷಣ ಆಸ್ತಿ ತೆರಿಗೆ ಹೆಚ್ಚಳ ಮಾಡಿ ಜನರನ್ನು ವಂಚಿಸಿದೆ. ತೆರಿಗೆ ಸಂಗ್ರಹ ಮಾಡುವಲ್ಲಿಯೂ ಪಾಲಿಕೆ ಆಡಳಿತ ತಾರತಮ್ಯ ನೀತಿ ಅನುಸರಿಸಿದೆ. ನಗರದ ನಾಗರಿಕರು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿದ್ದಾರೆ. ಆದರೆ ತೆರಿಗೆ ಪಾವತಿಸಲು ಬಾಕಿ ಇರಿಸಿಕೊಂಡವರ ಬಗ್ಗೆ ಪಾಲಿಕೆ ಆಡಳಿತ ಯಾವುದೇ ಕ್ರಮ ವಹಿಸಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News