ಅಯೋಧ್ಯೆ ತೀರ್ಪು: ಉಡುಪಿ ಜಿಲ್ಲೆಯಲ್ಲಿ ಬಿಗುಭದ್ರತೆ; ಶಾಲೆ,ಕಾಲೇಜುಗಳಿಗೆ ರಜೆ ಘೋಷಣೆ

Update: 2019-11-08 17:45 GMT

ಉಡುಪಿ, ನ.8: ಸುಪ್ರೀಂ ಕೋರ್ಟಿನ ಅಯೋಧ್ಯೆ ತೀರ್ಪು ನ.9ರಂದು ಬರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಂದು ಉಡುಪಿ ಜಿಲ್ಲೆಯಾದ್ಯಂತ ಬಿಗು ಭದ್ರತೆಯನ್ನು ಏರ್ಪಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಈ ನಡುವೆ ಶನಿವಾರ ಉಡುಪಿ ಜಿಲ್ಲೆಯ ಎಲ್ಲಾ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆಯನ್ನು ಘೋಷಿಸಿದೆ. ಪದವಿ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿರುವುದರಿಂದ ಅವುಗಳಿಗೆ ರಜೆಯ ನಿರ್ಧಾರವನ್ನು ವಿವಿಯೇ ಪ್ರಕಟಿಸಬೇಕಾಗಿದೆ ಎಂದು ತಿಳಿದುಬಂದಿದೆ.

ತೀರ್ಪಿನ ಹಿನ್ನೆಲೆಯಲ್ಲಿ ಯಾವುದೇ ಹಿಂಸೆ, ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಬೇಕಾದ ಎಲ್ಲಾ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದೆ. ಜಿಲ್ಲೆಯಲ್ಲಿ ಈಗಾಗಲೇ ನಾಲ್ಕು ತುಕಡಿ ಕೆಎಸ್‌ಆರ್‌ಪಿ ಹಾಗೂ ಹಾಗೂ ಏಳು ತುಕಡಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಎಸ್ಪಿಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ಎಲ್ಲಾ ಸಮುದಾಯಗಳ ನಾಯಕರುಗಳೊಂದಿಗೆ ಸಭೆಯನ್ನು ನಡೆಸಿದ್ದು, ಸುಪ್ರೀಂ ಕೋರ್ಟಿನ ತೀರ್ಪು ಏನೇ ಬಂದರೂ ಅದನ್ನು ಶಾಂತಿಯುತ ವಾಗಿ ಸ್ವೀಕರಿಸುವಂತೆ ಮನವಿ ಮಾಡಲಾಗಿದೆ. ಯಾವುದೇ ರೀತಿಯಲ್ಲಿ ವಿಜಯೋತ್ಸವನ್ನಾಗಲಿ, ಪ್ರತಿಭಟನೆಯನ್ನಾಗಿ ನಡೆಸದಂತೆ ಅವರಲ್ಲಿ ವಿನಂತಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಸಾರ್ವಜನಿಕರೂ ಸಹ ಈ ಬಗ್ಗೆ ಯಾವುದೇ ಉದ್ರೇಕರಾಗಿ ಹೇಳಿಕೆ ನೀಡದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್‌ಗಳನ್ನು ಹಾಕುವಾಗ ಸಂಯಮವನ್ನು ಕಾಪಾಡುವಂತೆ, ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕದಂತೆ ಸಲಹೆ ನೀಡಲಾಗಿದೆ. ಇಂಥ ಯಾವುದೇ ಪ್ರಕರಣ ಕಂಡುಬಂದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ನಿಶಾ ಜೇಮ್ಸ್ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News