ಮಂಗಳೂರಿನಲ್ಲಿ ಸಂಜೆ ಬಳಿಕ ತೆರೆದ ಒಪಿಡಿ

Update: 2019-11-08 17:25 GMT

ಮಂಗಳೂರು, ನ.8: ಬೆಂಗಳೂರಿನ ಮಿಂಟೊ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ನಗರದ ಆಸ್ಪತ್ರೆಗಳ ಒಪಿಡಿಯನ್ನು ಶುಕ್ರವಾರ ಸಂಜೆ 4:30ರವರೆಗೆ ಬಂದ್ ಮಾಡಲಾಗಿತ್ತು. ಐಎಂಎ ಮನವಿಗೆ ಸ್ಪಂದಿಸಿ ನಗರ ಬಹುತೇಕ ಆಸ್ಪತ್ರೆಗಳ ಒಪಿಡಿ ಬಂದ್ ಆಗಿದ್ದವು ಎಂದು ಐಎಂಎ ಮಂಗಳೂರು ಶಾಖೆಯ ಅಧ್ಯಕ್ಷ ಅಣ್ಣಯ್ಯ ಕುಲಾಲ್ ತಿಳಿಸಿದ್ದಾರೆ.

ಶುಕ್ರವಾರ ಬೆಳಗ್ಗೆ 6ರಿಂದಲೇ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಲಾಗಿತ್ತು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಒತ್ತಾಯ ಪೂರ್ವಕವಾಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಲು ಅವಕಾಶ ಇರಲಿಲ್ಲ. ಕೇವಲ ಮನವಿ ಮಾಡಿದ್ದೆವು ಎಂದರು.

ಐಎಂಎ ಬೆಂಗಳೂರು ಶಾಖೆಯು ಪ್ರತಿಭಟನೆಯನ್ನು ಸಂಜೆ 4 ಗಂಟೆಗೆ ಹಿಂದೆಗೆದುಕೊಂಡಿತು. ಬೆಂಗಳೂರು ಶಾಖೆಯ ಆದೇಶದನ್ವಯ ಮಂಗಳೂರಿನಲ್ಲಿ ಬಂದ್ ಆಗಿದ್ದ ಒಪಿಡಿಗಳನ್ನು ಸಂಜೆ 4:30ರ ನಂತರ ತೆರೆಯಲಾಯಿತು. ನಗರದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದು ಅಣ್ಣಯ್ಯ ಕುಲಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News