ಅನಾಮಧೇಯ ಡ್ರೋನನ್ನು ಹೊಡೆದುರುಳಿಸಿದ ಇರಾನ್

Update: 2019-11-08 18:04 GMT

ಟೆಹರಾನ್ (ಇರಾನ್), ನ. 8: ಕೊಲ್ಲಿ ಕರಾವಳಿಯಲ್ಲಿರುವ ಬಂದರ್-ಎ-ಮಹ್ಶಾಹರ್ ಬಂದರಿನ ಸಮೀಪ ಶುಕ್ರವಾರ ಇರಾನ್ ಸೇನೆಯು ಒಂದು ಅಪರಿಚಿತ ಡ್ರೋನನ್ನು ಹೊಡೆದುರುಳಿಸಿದೆ ಎಂದು ಎಂದು ಇರಾನ್‌ನ ಅರೆ ಸರಕಾರಿ ಸುದ್ದಿ ಸಂಸ್ಥೆ ಐಎಸ್‌ಎನ್‌ಎ ವರದಿ ಮಾಡಿದೆ.

ಮಾನವರಹಿತ ಡ್ರೋನನ್ನು ಇರಾನ್ ಭೂಭಾಗದಲ್ಲಿ ದೇಶದಲ್ಲೇ ತಯಾರಿಸಲಾದ ‘ಮೆರ್ಸದ್’ ಕ್ಷಿಪಣಿಯಿಂದ ಉರುಳಿಸಲಾಯಿತು ಎಂದು ಇನ್ನೊಂದು ಸುದ್ದಿ ಸಂಸ್ಥೆ ‘ತಸ್ನಿಮ್’ ತಿಳಿಸಿದೆ.

ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಯಾವುದೇ ಸುದ್ದಿ ಸಂಸ್ಥೆಯು ನೀಡಿಲ್ಲ. 2015ರ ಪರಮಾಣು ಒಪ್ಪಂದದಿಂದ ಅಮೆರಿಕ ಕಳೆದ ವರ್ಷ ಏಕಪಕ್ಷೀಯವಾಗಿ ಹಿಂದೆ ಸರಿದ ಬಳಿಕ, ಅಮೆರಿಕ ಮತ್ತು ಇರಾನ್‌ಗಳ ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವ ಸಮಯದಲ್ಲಿ ಈ ಘಟನೆ ನಡೆದಿದೆ.

ಜೂನ್ ತಿಂಗಳಲ್ಲಿ ಇರಾನ್ ಅಮೆರಿಕದ ಡ್ರೋನೊಂದನ್ನು ಹೊಡೆದುರುಳಿಸಿತ್ತು. ಆಗ ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದ್ದರಾದರೂ, ಕೊನೆಯ ಕ್ಷಣದಲ್ಲಿ ಅದನ್ನು ಹಿಂದಕ್ಕೆ ಪಡೆದುಕೊಂಡರು.

ಸೆಪ್ಟಂಬರ್ 14ರಂದು ಸೌದಿ ಅರೇಬಿಯದ ತೈಲ ಸ್ಥಾವರಗಳ ಮೇಲೆ ಸರಣಿ ದಾಳಿ ನಡೆದ ಬಳಿಕವಂತೂ, ಆ ವಲಯದಲ್ಲಿನ ಉದ್ವಿಗ್ನತೆ ಸ್ಫೋಟಗೊಳ್ಳುವ ಹಂತಕ್ಕೆ ತಲುಪಿತ್ತು. ದಾಳಿಯನ್ನು ಇರಾನ್ ಮಾಡಿದೆ ಎಂಬುದಾಗಿ ಸೌದಿ ಅರೇಬಿಯ ಮತ್ತು ಅಮೆರಿಕ ಆರೋಪಿಸಿದರೆ, ಈ ಆರೋಪವನ್ನು ಇರಾನ್ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News