ಮಂದಿರ, ಮಸೀದಿ ಪರಸ್ಪರ ಸಹಕಾರದಲ್ಲಿ ನಿರ್ಮಾಣವಾಗಲಿ: ಪೇಜಾವರಶ್ರೀ

Update: 2019-11-09 06:27 GMT

ಉಡುಪಿ, ನ.9: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಇಂದು ನೀಡಿರುವ ತೀರ್ಪನ್ನು ಎಲ್ಲರೂ ಸಮಚಿತ್ತದಿಂದ ಸ್ವೀಕರಿಸಬೇಕು. ನನಗೆ ವೈಯಕ್ತಿಕವಾಗಿಯೂ ಈ ತೀರ್ಪು ಸಮ್ಮತವಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾತನಾಡಿದ ಅವರು, ಮುಸ್ಲಿಮರಿಗೂ ಐದು ಎಕರೆ ಕೊಡಬೇಕು ಎಂದು ತೀರ್ಪಿನಲ್ಲಿ ಹೇಳಿದ್ದಾರೆ. ಸರಕಾರವೇ ರಾಮಮಂದಿರ ನಿರ್ಮಾಣ ಮಾಡಬೇಕು ಎಂಬ ತೀರ್ಪು ಬಂದಿದೆ. ಹಿಂದೂಗಳಿಗೆ ಜನ್ಮಭೂಮಿಯ ಹಕ್ಕು ಮುಖ್ಯ. ಮುಸ್ಲಿಮರಿಗೆ ಮಸೀದಿಗೆ ಜಾಗ ಮುಖ್ಯ. ಈ ನಿಟ್ಟಿನಲ್ಲಿ ನ್ಯಾಯಾಲಯದ ಈ ತೀರ್ಪು ಹಿಂದೂ-ಮುಸ್ಲಿಮರಲ್ಲಿ ಬಾಂಧವ್ಯ ಬೆಳೆಯಲು ಉತ್ತಮ ಅವಕಾಶ ಎಂದು ಅಭಿಪ್ರಾಯಿಸಿದರು.

ಹಿಂದೂ-ಮುಸ್ಲಿಮರು ಒಟ್ಟು ಸೇರಿ ಸೂಕ್ತ ಸ್ಥಳವನ್ನು ಮಸೀದಿಗೆ ಕೊಡಬೇಕು. ಅದೇರೀತಿ ಮಸೀದಿ ನಿರ್ಮಾಣಕ್ಕೆ ಹಿಂದೂಗಳು ಸಹಕರಿಸಬೇಕು, ಮಂದಿರ ನಿರ್ಮಾಣ ವಿಚಾರದಲ್ಲಿ ಮುಸ್ಲಿಮರೂ ಸಹಕರಿಸಬೇಕು ಎಂದು ಪೇಜಾವರಶ್ರೀ ಹೇಳಿದರು.

ವಿಜಯೋತ್ಸವ, ಮೆರವಣಿಗೆ ಬೇಡ ಎಂದು ಗುರುವಾರವೇ ಹೇಳಿದ್ದೆ. ಈಗಲೂ ಪುನರುಚ್ಚಾರ ಮಾಡುವೆ. ಮುಸ್ಲಿಮರು ಕೂಡಾ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ದೇಶದ ಎಲ್ಲರೂ ಕೋಮು ಸೌಹಾರ್ದದಿಂದ ಇರಬೇಕು ಎಂದು ಮನವಿ ಮಾಡುವೆ ಎಂದವರು ನುಡಿದರು.

ನನ್ನ ಇಳಿ ವಯಸ್ಸಿನಲ್ಲಿ ಈ ತೀರ್ಪು ನೋಡುತ್ತೇನೆ ಎಂದು ಭಾವಿಸಿರಲಿಲ್ಲ ವೈಯಕ್ತಿಕವಾಗಿಯೂ ಸಂತೋಷವಾಗಿದೆ ಎಂದು ಪೇಜಾವರಶ್ರೀ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News