​ಅಯೋಧ್ಯೆ ತೀರ್ಪು: ಮಂದಿರ ಮಸೀದಿಗಳಿಗಿಂತ ಮನುಷ್ಯನ ಜೀವ ಅಮೂಲ್ಯ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ

Update: 2019-11-09 08:59 GMT

ಉಡುಪಿ, ನ.9: ಎಲ್ಲಕ್ಕಿಂತ ಮುಖ್ಯವಾಗಿ ಮಂದಿರ ಮಸೀದಿಗಳಿಗಿಂತಲೂ ಪವಿತ್ರ ಮತ್ತು ಅಮೂಲ್ಯವಾದದ್ದು ಮನುಷ್ಯನ ಜೀವ. ಈಗಾಗಲೇ ಈ ವಿವಾದದ ಹೆಸರಿನಲ್ಲಿ ಅದೆಷ್ಟೋ ಮಾನವ ಜೀವಗಳನ್ನು ಕಳೆದುಕೊಂಡಿದ್ದೇವೆ. ಇನ್ನಾದರೂ ಅದಕ್ಕೆ ಕಡಿವಾಣ ಬೀಳಬೇಕು. ಈ ನೆಪದಲ್ಲಿ ನಡೆಯುತ್ತಿರುವ ರಾಜಕೀಯ ಕೊನೆಗೊಳ್ಳಬೇಕು. ಇದನ್ನು ನೆಪವಾಗಿಟ್ಟುಕೊಂಡು ಜಿಲ್ಲೆಯ ಯಾವುದೇ ಸಮುದಾಯಗಳು ಮತ್ತು ಸಂಘಟನೆಗಳು ಸಮಾಜದ ಸ್ವಾಸ್ಥಕ್ಕೆ ಭಂಗ ತರುವ ಕೆಲಸಕ್ಕೆ ಕೈ ಹಾಕಬಾರದು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಮನವಿ ಮಾಡಿದೆ.

ಸ್ಥಳೀಯ ಸಮಸ್ಯೆಯಾಗಿದ್ದ ಅಯೋಧ್ಯೆ ವಿವಾದವು ರಾಜಕೀಯ ಪ್ರವೇಶಿಸಿದ ಬಳಿಕ ಅನಿವಾರ್ಯವಾಗಿ ರಾಷ್ಟ್ರೀಯ ವಿಷಯವಾಗಿದೆ. ಇಂತಹ ಮಹತ್ವದ ರಾಷ್ಟ್ರಮಟ್ಟದ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಲು ಸಮುದಾಯವನ್ನು ಪ್ರತಿನಿಧಿಸುವ ರಾಷ್ಟ್ರಮಟ್ಟದ ಸಂಘಟನೆಗಳು ಹಾಗೂ ಒಕ್ಕೂಟಗಳಿವೆ. ಅವುಗಳು ಈಗಾಗಲೇ ಅಯೋಧ್ಯೆ ತೀರ್ಪಿನ ಕುರಿತು ತಮ್ಮ ನಿಲುವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿವೆ. ಹಾಗಾಗಿ ಈ ವಿಷಯದ ಕುರಿತು ಪ್ರತಿ ಜಿಲ್ಲೆ, ತಾಲೂಕು ಮಟ್ಟದಲ್ಲಿರುವ ಮುಸ್ಲಿಮ್ ಸಂಘಟನೆಗಳು ಪ್ರತ್ಯೇಕವಾಗಿ ಯಾವುದೇ ಅಭಿಪ್ರಾಯ ನೀಡುವ ಅಗತ್ಯವಿಲ್ಲ ಎಂದರು.

ಅಯೋಧ್ಯೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಏನೇ ಬಂದರೂ ನಾವು ಭಾವನಾತ್ಮಕವಾಗಿ ಪ್ರತಿಕ್ರಿಯಿಸದೆ ತೀರ್ಪನ್ನು ಗೌರವಿಸಿ ಮುಂದಿನ ಕಾನೂನು ಹೆಜ್ಜೆ ಇಡುತ್ತೇವೆ ಎಂದು ಈಗಾಗಲೇ ಹೇಳಿದ್ದೇವೆ. ಅದೇ ನಿಲುವನ್ನು ಈಗಲೂ ಪುನರುಚ್ಚರಿಸುತ್ತಿದ್ದೇವೆ. ಇದು ಬೀದಿಗಿಳಿದು ಮಾತನಾಡುವ ವಿಷಯವಲ್ಲ ಎಂದು ಮೊದಲೂ ಹೇಳಿದ್ದೇವೆ. ಈಗಲೂ ಅದಕ್ಕೆ ಬದ್ಧರಾಗಿದ್ದೇವೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಮುಹಮ್ಮದ್ ಯಾಸೀನ್ ಮಲ್ಪೆ ಹೇಳಿಕೆಯಲ್ಲಿ ತಿಳಿಸಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News