×
Ad

ಅಯೋಧ್ಯೆ ತೀರ್ಪು: ಮುಸ್ಲಿಮರ ಪರ ವಾದ ಮಂಡಿಸಿದ ತಂಡದಲ್ಲಿ ಕರಾವಳಿಯ ಇಬ್ಬರು ವಕೀಲರು

Update: 2019-11-09 16:44 IST

ಕಡಬ: ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ಮುಸ್ಲಿಮರ ಪರವಾಗಿ ವಾದ ನಡೆಸಲು ದೇಶದ ಹಿರಿಯ ವಕೀಲರಾದ ಡಾ. ರಾಜೀವ್ ಧವನ್, ಮೀನಾಕ್ಷಿ ಅರೋರಾ ಹಾಗೂ ಝಫರ್ಯಾಬ್ ಜೀಲಾನಿಯವರನ್ನು ನೇಮಿಸಲಾಗಿದ್ದು, ಈ ತಂಡದಲ್ಲಿ ಉಪ್ಪಿನಂಗಡಿ ಹಾಗೂ ಸುಳ್ಯದ ಯುವ ವಕೀಲರಿಬ್ಬರು ಇದ್ದರೆನ್ನುವುದು ತಿಳಿದುಬಂದಿದೆ.

ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ನಿವಾಸಿ ದಿ. ಯೂಸುಫ್ ಎಂಬವರ ಪುತ್ರ ಅಬ್ದುಲ್ ರಹಿಮಾನ್‌ ಹಾಗೂ ಸುಳ್ಯ ಸಮೀಪದ ಗಾಂಧಿನಗರ ಕಲ್ಲುಮುಟ್ಲು ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಶರೀಫ್ ಮುಸ್ಲಿಮರ ಪರವಾಗಿ ವಾದಿಸುವ ತಂಡದಲ್ಲಿದ್ದ ವಕೀಲರು. ಪುತ್ತೂರಿನ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಡೆಸುವ ಮೂಲಕ ತನ್ನ ವೃತ್ತಿಯನ್ನು ಆರಂಭಿಸಿದ್ದ ಅಬ್ದುಲ್ ರಹಿಮಾನ್ ಬಳಿಕ ಸುಪ್ರಿಂ ಕೋರ್ಟಿನಲ್ಲಿ ವಕೀಲರಾಗಿ ಸೇವೆ ಆರಂಭಿಸಿದ್ದರು.

ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸುಳ್ಯದ ಗಾಂಧಿನಗರದಲ್ಲಿ ಪೂರೈಸಿ, ಸುಳ್ಯ ಸರಕಾರಿ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದ ಶರೀಫ್, ಸುಳ್ಯದ ಎನ್.ಎಂ.ಸಿ. ಯಲ್ಲಿ ಪದವಿ ಹಾಗೂ ಕೆವಿಜಿಯಲ್ಲಿ ಎಲ್.ಎಲ್.ಬಿ ಮುಗಿಸಿ 2018 ಫೆಬ್ರವರಿಯಿಂದ ಸುಪ್ರೀಂ ಕೋರ್ಟ್ ನಲ್ಲಿ ವಕೀಲರಾಗಿ ವಾದ ಮಂಡಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News