×
Ad

ಎಸ್.ಡಿ.ಪಿ.ಐ ಸ್ಪರ್ಧಿಸಿದ ಎಲ್ಲಾ ವಾರ್ಡ್ ಗಳಲ್ಲಿ ಜಯ ಖಚಿತ - ಅಥಾವುಲ್ಲ ಜೋಕಟ್ಟೆ

Update: 2019-11-09 19:06 IST

ಮಂಗಳೂರು : ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಸ್‌ಡಿಪಿ ಪಕ್ಷದ ಎಲ್ಲಾ ಆರು ಅಭ್ಯರ್ಥಿಗಳ ಜಯ ಖಚಿತ. ಪಾಲಿಕೆಯ 60 ವಾರ್ಡ್ ಗಳ ಚುನಾವಣೆಯಲ್ಲಿ ಪಕ್ಷ ಗೆಲ್ಲುವ ಆರು ವಾರ್ಡ್ ಗಳಲ್ಲಿ ಮಾತ್ರ ಸ್ಪದಿಸುತ್ತಿದೆ. ಕಳೆದ ಒಂದು ವರ್ಷದಿಂದ ಒಟ್ಟು 25 ವಾರ್ಡುಗಳಲ್ಲಿ ಹೊರಾಟ, ಸೇವೆ, ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ, ಆದರೆ ಗೆಲುವು ಖಚಿತವಿರುವ ಆರು ವಾರ್ಡುಗಳಲ್ಲಿ ಮಾತ್ರ ಸ್ಪರ್ದಿಸಲು ತೀರ್ಮಾನಿಸಲಾಯಿತು ಎಂದು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ದ.ಕ. ಜಿಲ್ಲಾಧ್ಯಕ್ಷ ಅಥಾವುಲ್ಲ ಜೋಕಟ್ಟೆ ತಿಳಿಸಿದ್ದಾರೆ.

ಎಸ್‌ಡಿಪಿಐ ಕಳೆದ ಹತ್ತು ವರ್ಷದಿಂದ ರಾಷ್ಟ್ರದ 20 ರಾಜ್ಯಗಳಲ್ಲಿ ಸಕ್ರೀಯವಾಗಿ ಹೋರಾಟ ಮತ್ತು ಚುನಾವಣಾ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ. ರಾಜ್ಯದ 110 ಪ್ರದೇಶಗಳಲ್ಲಿ ಕಾರ್ಪೊರೇಟರ್, ಕೌನ್ಸಿಲರ್ ಮತ್ತಿತರ ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದಿದೆ.  ಜೆಡಿಎಸ್, ಕಾಂಗ್ರೆಸ್, ಬಿಜೆಪಿಗೆ ಪರ್ಯಾಯವಾಗಿ ಸಂವಿಧಾನ ಮೌಲ್ಯಗಳನ್ನು ಎತ್ತಿ ಹಿಡಿಯುವ ಪಕ್ಷವಾಗಿ ಕರ್ನಾಟಕದಲ್ಲಿ ಎಸ್‌ಡಿಪಿಐ ಯನ್ನು ಮತದಾರರು ಗುರುತಿಸಿಕೊಂಡಿದ್ದಾರೆ. ಹಿಂದೂ, ಮುಸ್ಲಿಂ, ಕ್ರೈಸ್ತ ಮತ್ತಿತರ ಎಲ್ಲಾ ಜಾತಿ, ಧರ್ಮ, ಬಾಷೆಗಳ ಜನರು ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಎಲ್ಲಾ ಧರ್ಮದವರ ಮತಗಳನ್ನು ಪಡೆದು ಈ ಬಾರಿ ಎಸ್‌ಡಿಪಿಐ ಗೆಲುವು ಖಚಿತವಾಗಿದೆ. ಎಸ್‌ಡಿಪಿಐ ಪಕ್ಷದಿಂದ ಕಾಟಿಪಳ್ಳ ಉತ್ತರ ವಾರ್ಡ್ 5 ರಲ್ಲಿ ಸಂಶಾದ್ ಅಬೂಬಕ್ಕರ್ ಮತ್ತು ಕಣ್ಣೂರು ವಾರ್ಡ್ 52 ರಲ್ಲಿ ಮಿಶ್ರಿಯಾ ಹನೀಫ್ ಸ್ಪರ್ದಿಸುತ್ತಿದ್ದಾರೆ. ವಿದ್ಯಾವಂತ ಮಹಿಳಾ ಅಭ್ಯರ್ಥಿಗಳು ಸಮಾಜ ಸೇವೆ ಮತ್ತು ಉತ್ತಮ ಕೌಟುಂಬಿಕ ಹಿನ್ನೆಲೆಯವರಾಗಿದ್ದಾರೆ. ಪಂಜಿಮೊಗರು ವಾರ್ಡ್ 12 ರಲ್ಲಿ ಹನೀಫ್, ಕುದ್ರೋಳಿ ವಾರ್ಡ್ 43 ರಲ್ಲಿ ಮುಝೈರ್, ಬಜಾಲ್ ವಾರ್ಡ್ 53 ರಲ್ಲಿ ಕಬೀರ್ ಮತ್ತು ಬೆಂಗರೆ ವಾರ್ಡ್ 60 ರಲ್ಲಿ ಮುನೀಬ್ ಸ್ಪರ್ದಿಸುತ್ತಿದ್ದಾರೆ. ಯುವ ಹೋರಾಟಗಾರರು, ಬಡವರಿಗೆ ಸರಕಾರಿ ಸೌಲಭ್ಯಗಳನ್ನು ನಿರಂತರವಾಗಿ ತಲುಪಿಸಲು ರಾತ್ರಿ ಹಗಲು ದುಡಿದವರು, ವಾರ್ಡಿನಲ್ಲಿ ಎಲ್ಲರೊಂದಿಗೆ ಆತ್ಮೀಯ ಸಂಬಂಧ ಹೊಂದಿದವರು, ಭ್ರಷ್ಟಾಚಾರ, ಲಂಚ ಮತ್ತಿತರ ಸಾಮಾಜಿಕ ಕೆಡುಕುಗಳಿಂದ ಮುಕ್ತರಾಗಿದ್ದ ಎಸ್‌ಡಿಪಿಐ ಅಭ್ಯರ್ಥಿಗಳ ಪರವಾಗಿ ಅಭೂತಪೂರ್ವ ಜನಬೆಂಬಲ ಸಿಗುತ್ತಿದೆ ಎಂದರು.

ಎಸ್‌ಡಿಪಿಐ ಸ್ಪರ್ಧಿಸಿದ ಆರು ವಾರ್ಡುಗಳಲ್ಲಿ ಮನೆ ಮನೆಗೆ ಹೋಗಿ ಮೂರು ಸುತ್ತಿನ ಮತ ಯಾಚನೆ ಮಾಡಲಾಗಿದೆ. ಕಾರ್ಯಕರ್ತರು ಮತ್ತು ಸ್ಥಳೀಯ ಬೆಂಬಲಿಗರು ರಾತ್ರಿ ಹಗಲು ಗೆಲುವಿಗಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಶ್ರಮಿಸುತ್ತಿದ್ದಾರೆ. ನಿಸ್ವಾರ್ಥ ಮತ್ತು ಶಿಸ್ತು ಬದ್ಧ ಕಾರ್ಯಕರ್ತರು ಹೊಂದಿದ ಪಕ್ಷವಾಗಿದೆ ಎಸ್‌ಡಿಪಿಐ. ಬಡವರು, ಅವಕಾಶವಂಚಿತ ಜನ ಸಮುದಾಯಗಳ, ಯುವಕರು, ಮುಸ್ಲಿಮರು, ಕ್ರೈಸ್ತರು ಮತ್ತು ಹಿಂದುಳಿದ ವರ್ಗಗಳ ಸಮಾನರು ಸಮಾನ ಅವಕಾಶಕ್ಕಾಗಿ ಎಸ್‌ಡಿಪಿಐ ಮಾಡುತ್ತಿರುವ ಹೋರಾಟಗಳನ್ನು ಮತದಾರರು ಗುರುತಿಸಿದ್ದಾರೆ. ಅವರ ಅಮೂಲ್ಯ ಮತಗಳ ನೈಜ ಹಕ್ಕುದಾರರು ಎಸ್‌ಡಿಪಿಐ ಎಂದು ತೀರ್ಮಾನಿಸಿದ್ದಾರೆ ಎಂದು ಹೇಳಿದರು.

ಪಕ್ಷದ ಅಭ್ಯರ್ಥಿಗಳು ಕಾರ್ಯಕರ್ತರು ಮತ್ತು ನಾಯಕರು ಒಂದಾಗಿ ಗೆದ್ದ ವಾರ್ಡುಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಾರೆ. ಯಾವುದೇ ಸುಳ್ಳಾರೋಪ, ಅಪಪ್ರಚಾರ, ಹಣಬಲ, ತೊಲ್ಬಲ, ಆಸೆ, ಆಮಿಷ, ಒತ್ತಡಗಳಿಗೆ ಒಳಗಾಗದೆ ನಿರ್ಭಯವಾಗಿ ಎಸ್‌ಡಿಪಿಐ ಪಕ್ಷದ ಗ್ಯಾಸ್ ಸಿಲಿಂಡರ್ ಚಿಹ್ನೆಗೆ ಅಮೂಲ್ಯ ಮತವನ್ನು ನೀಡಬೇಕಾಗಿ ವಿನಂತಿಸುತ್ತೇವೆ. ತಮ್ಮ ಭರವಸೆಗಳನ್ನು ಖಂಡಿತವಾಗಿಯೂ ಈಡೇರಿಸುತ್ತೇವೆ ಎಂದು ಅಭ್ಯಥಿಗಳು ಮತ್ತು ಕಾರ್ಯಕರ್ತರು ವಾಗ್ದಾನ ಮಾಡಿದ್ದಾರೆ ಎಂದು ಅಥಾವುಲ್ಲ ಜೋಕಟ್ಟೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News