ಸುಪ್ರೀಂ ಕೋರ್ಟ್ ತೀರ್ಪು ಭಾರತೀಯರ ಭಾವನೆ, ನಂಬಿಕೆಗೆ ದೊರೆತ ಗೌರವ: ಕೋಟ
ಉಡುಪಿ, ನ.9: ಅಯೋಧ್ಯೆಗೆ ಸಂಬಂಧಿಸಿದ ಐತಿಹಾಸಿಕ ತೀರ್ಪು ಜನರ ಭಾವನೆಗಳು ಮತ್ತು ಭಾರತೀಯರ ನಂಬಿಕೆಗಳಿಗೆ ದೊರೆತ ಗೌರವ ಆಗಿದೆ. ಶತಮಾನದಿಂದ ನಡೆಯುತ್ತಿದ್ದ ಸುಧೀರ್ಘ ಕಾನೂನಾತ್ಮಕ ಹೋರಾಟಕ್ಕೆ ಇಂದು ಸುಪ್ರೀಂ ಅಂತಿಮ ತೆರೆ ಎಳೆದು ಸಂವಿಧಾನ್ಮಾತಕ ವಿಚಾರಗಳನ್ನ ಎತ್ತಿ ಹಿಡಿಯುವ ನಿರ್ಣಯ ಕೈಗೊಂಡಿದೆ ಎಂದು ರಾಜ್ಯ ಮೀನುಗಾರಿಕಾ, ಬಂದರು ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಎಲ್ಲ ರಾಜಕೀಯ ಪಕ್ಷಗಳು ಮುಕ್ತ ಕಂಠದಿಂದ ಈ ತೀರ್ಪನ್ನು ಸ್ವಾಗತಿಸಿರುವುದು ಸಂತೋಷ. ಈ ತೀರ್ಪು ಗೆಲುವು ಮತ್ತು ಸೋಲು ಎನ್ನುವುದಕ್ಕಿಂತ ನ್ಯಾಯ ಮಂಥನದಿಂದ ಬಂದ ಸಾತ್ವಿಕ ಸಂವಿಧಾನದ ಪರಮೋಚ್ಛ ನಿರ್ಣಯವಾಗಿದೆ ಎಂದು ತಿಳಿಸಿದರು.
ಈ ತೀರ್ಪನ್ನು ರಾಜ್ಯ ಮತ್ತು ದೇಶದೆಲ್ಲೆಡೆ ಸಮಸ್ತ ಭಾರತೀಯರು ಗೌರವಿಸ ಬೇಕು. ಎಲ್ಲರು ಒಟ್ಟಾಗಿ ಬದುಕುವಂತಹ ಭಾವನೆ ಗಳಿಗೆ ಗೌರವಗಳನ್ನು ಕೊಡಬೇಕು. ಈ ಮೂಲಕ ಇಡೀ ದೇಶ ಒಂದು ಎಂಬ ಭಾವನೆಯನ್ನು ಎತ್ತಿ ಹಿಡಿಯುವ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.
ಸೌಹಾರ್ದ ಸಮಿತಿ ಸ್ವಾಗತ: ಸುಪ್ರೀಂ ಕೋರ್ಟ್ ಇಂದು ನೀಡಿದ ಅಯೋಧ್ಯೆ ತೀರ್ಪನ್ನು ಉಡುಪಿ ಜಿಲ್ಲಾ ಸೌಹಾರ್ದ ಸಮಿತಿ ಸ್ವಾಗತಿಸಿದೆ. ಈ ಕುರಿತ ಪೇಜಾವರಶ್ರೀಗಳ ನಿಲುವಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಈ ಕುರಿತು ಪೇಜಾವರ ಮಠದಲ್ಲಿ ಶ್ರೀವಿಶ್ವೇಶತೀರ್ಥರನ್ನು ಭೇಟಿಯಾದ ಸಮಿತಿಯ ಅನ್ಸಾರ್ ಅಹ್ಮದ್, ಕರಾಮತ್ತುಲ್ಲಾ, ಮುಹಮ್ಮದ್ ಆರೀಫ್, ಮನ್ಸೂರ್ ತಿಳಿಸಿದರು.
ಸುಪ್ರೀಂ ಕೋರ್ಟಿನ ಇಂದಿನಿಂದ ತೀರ್ಪಿನಿಂದ ಶತಮಾನಗಳಷ್ಟು ಹಳೆಯ ದಾದ ವಿವಾದವೊಂದು ಬಗೆಹರಿದಂತಾಗಿದೆ. ಇದಕ್ಕಾಗಿ ನಾವು ತೀರ್ಪನ್ನು ಸ್ವಾಗತಿಸುತ್ತೇವೆ ಎಂದು ಅನ್ಸಾರ್ ಅಹಮ್ಮದ್ ತಿಳಿಸಿದರು.