ವಿಶೇಷ ಶಿಕ್ಷಕರ ಸಂಬಳ ಹೆಚ್ಚಿಸಲು ಸರಕಾರಕ್ಕೆ ಮನವಿ: ಜಿ.ಶಂಕರ್
ಉಡುಪಿ, ನ.9: ಸಾಮಾನ್ಯ ಶಿಕ್ಷಕರಿಗಿಂತ ವಿಶೇಷ ಮಕ್ಕಳ ಶಿಕ್ಷಕರಿಗೆ ಬಹಳ ಕಷ್ಟ ಇದೆ. ಮಕ್ಕಳಿಗೆ ಕಲಿಸುವುದು ಬಹಳ ಕಷ್ಟದ ಕೆಲಸ. ಈ ಶಿಕ್ಷಕರಿಗೆ ಸರಕಾರ ದಿಂದ ಸಂಬಳ ಪ್ರತಿ ತಿಂಗಳು ಸರಿಯಾಗಿ ಬರುತ್ತಿಲ್ಲ. ಅಲ್ಲದೆ ಸಂಬಳ ಕೂಡ ಬಹಳ ಕಡಿಮೆ ಇದೆ. ಈ ಕುರಿತು ಇವರು ಅನೇಕ ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದುದರಿಂದ ಜಿಲ್ಲಾಡಳಿತ ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕು ಎಂದು ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್ ಮನವಿ ಮಾಡಿದ್ದಾರೆ.
ಉಡುಪಿ ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಆಶ್ರಯದಲ್ಲಿ ಕುಂದಾಪುರ ಮೂಡುಬಗೆ ಅಂಪಾರು ವಾಗ್ಜೋತಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆಯ ಸಹಯೋಗದೊಂದಿಗೆ ಶನಿವಾರ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಅಂತರ್ ಜಿಲ್ಲಾ ಮಟ್ಟದ ವಿಶೇಷ ಮಕ್ಕಳ ಸಾಂಸ್ಕೃತಿಕ ಹಬ್ಬ ‘ಹೊಂಗಿರಣ-2019’ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವಿಶೇಷ ಮಕ್ಕಳು ಸಮಾಜದಲ್ಲಿ ಮುಂದೆ ಬರಬೇಕು. ಅವರನ್ನು ಸಮಾಜ ಕೀಳಾಗಿ ಪರಿಗಣಿಸಬಾರದು. ಅವರಿಗೆ ಅನುಕಂಪ ಬದಲು ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕು. ಈ ಮಕ್ಕಳ ಕೆಲಸ ಅಂದರೆ ದೇವರ ಕೆಲಸ. ಇವರನ್ನು ಸರಿಯಾಗಿ ನೋಡಿಕೊಳ್ಳುವುದೇ ಶಿಕ್ಷಕರಿಗೆ ದೊಡ್ಡ ಕೆಲಸವಾಗಿದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ವಿಶೇಷ ಮಕ್ಕಳ ಶಾಲೆಯನ್ನು ನಿರ್ವಹಿಸುವುದು ಮತ್ತು ಮಕ್ಕಳನ್ನು ಶಿಕ್ಷಕರು ನೋಡಿಕೊಳ್ಳುವುದು ಬಹಳ ಕಷ್ಟದ ಕೆಲಸ. ಇದಕ್ಕೆ ಎಲ್ಲರಿಂದಲೂ ಪ್ರೋತ್ಸಾಹ ಬೇಕಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಬ್ಯಾಂಕ್ ಆಫ್ ಬರೋಡ ಉಡುಪಿ ಪ್ರಾದೇಶಿಕ ಕಚೇರಿಯ ಉಪ ಮಹಾಪ್ರಬಂಧಕ ರವೀಂದ್ರ ರೈ ಮಾತನಾಡಿ, ವಿಶೇಷ ಮಕ್ಕಳು ಏಕಾಗ್ರತೆಯಿಂದ ಸರಿಯಾಗಿ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಾರೆ. ಅದೇ ನಮಗೆ ಮತ್ತು ವಿಶೇಷ ಮಕ್ಕಳಿಗೆ ಇರುವ ವ್ಯತ್ಯಾಸ. ಇವರಿಂದ ನಮಗೆ ಕಲಿಯಲು ತುಂಬಾ ಇದೆ. ಇವರು ವಿಕಲ ಅಲ್ಲ ಸುರ್ಥ ಮಕ್ಕಳು ಎಂದು ತಿಳಿಸಿದರು.
ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ವಿನಯ ಕರ್ಕೇರ ಉಪಸ್ಥಿತರಿದ್ದರು. ಚಂದ್ರೇಶ್ ಪಿತ್ರೋಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ದರು. ಆನಂದ ಎಸ್.ಕೆ. ವಂದಿಸಿದರು. ಈ ಸ್ಪರ್ಧೆಯಲ್ಲಿ ಮೂರು ಜಿಲ್ಲೆಗಳ 18 ವಿಶೇಷ ಶಾೆಗಳ ಮಕ್ಕಳು ಪಾಲ್ಗೊಂಡಿದ್ದರು.
ವಿಶೇಷ ಮಕ್ಕಳಿಗಾಗಿ ಕೋಟ್ ಧರಿಸಿದ ಡಿಸಿ!
ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮಕ್ಕೆ ಹೋಗುವಾಗ ನಾನು ಕೋಟ್ ಧರಿಸುವುದಿಲ್ಲ. ಆದರೆ ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳೆಂದರೆ ಹೀಗಿರು ತ್ತಾರೆ ಎಂಬುದನ್ನು ಮಕ್ಕಳು ನೋಡಬೇಕೆಂಬ ಕಾರಣಕ್ಕಾಗಿ ಕೋಟ್ ಧರಿಸಿ ಕೊಂಡು ಬಂದಿದ್ದೇನೆ. ನನ್ನನ್ನು ನೋಡಿ ಮಕ್ಕಳಿಗೆ ಪ್ರೇರಣೆ ಬರಬೇಕು. ನಾವು ಕೂಡ ಜಿಲ್ಲಾಧಿಕಾರಿಗಳಾಗಬೇಕು. ಆ ಮೂಲಕ ಸಮಾಜ, ಜಿಲ್ಲೆ, ರಾಜ್ಯವನ್ನು ಮುನ್ನಡೆಸಬೇಕು. ಅದಕ್ಕಾಗಿ ಮಕ್ಕಳು ನನ್ನನು ನೋಡಿ ಪ್ರೇರಣೆಯಾಗಲಿ ಎಂದು ಕೋಟ್‌ನ್ನು ಧರಿಸಿದ್ದೇನೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.