×
Ad

ಅಯೋಧ್ಯೆ ತೀರ್ಪು : ಸಮಚಿತ್ತರದಿಂದ ಸ್ವೀಕರಿಸಿದ ಕರಾವಳಿಗರು

Update: 2019-11-09 20:14 IST

ಮಂಗಳೂರು, ನ.9: ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶನಿವಾರ ನೀಡಿದ ತೀರ್ಪನ್ನು ಕರಾವಳಿಗರು ಸಮಚಿತ್ತದಿಂದ ಸ್ವೀಕರಿಸಿದರು. ಅಂತಿಮ ತೀರ್ಪು ಬಳಿಕ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಶುಕ್ರವಾರ ರಾತ್ರಿಯಿಂದಲೇ ದ.ಕ.ಜಿಲ್ಲಾಡಳಿತ ಮತ್ತು ದ.ಕ.ಜಿಲ್ಲಾ ಪೊಲೀಸ್ ಹಾಗೂ ಮಂಗಳೂರು ನಗರ ಪೊಲೀಸ್ ಇಲಾಖೆಯು ಸರ್ವ ಸಿದ್ಧತೆ ನಡೆಸಿತ್ತು.

ಶನಿವಾರ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿತ್ತಲ್ಲದೆ, ಮುಂಜಾಗ್ರತಾ ಕ್ರಮವಾಗಿ ರೌಡಿ ಶೀಟರ್ ಹಾಗೂ ಕ್ರಿಮಿನಲ್ ಹಿನ್ನಲೆಯ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿತ್ತು. ಅಲ್ಲದೆ ಜಿಲ್ಲಾದ್ಯಂತ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿತ್ತು. ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಹರ್ಷ ಪಿ.ಎಸ್. ಮತ್ತಿತರ ಹಿರಿಯ ಪೊಲೀಸ್ ಅಧಿಕಾರಿಗಳು ಉಳ್ಳಾಲ, ಸುರತ್ಕಲ್, ಜೋಕಟ್ಟೆ ಮತ್ತಿತರ ಪ್ರದೇಶಗಳಲ್ಲಿ ತೆರೆದ ಜೀಪಿನಲ್ಲಿ ಗಸ್ತು ನಡೆಸಿದರು.

ಜಿಲ್ಲಾಡಳಿತ-ಪೊಲೀಸ್ ಇಲಾಖೆ ಮುಂಜಾಗ್ರತೆಯ ಕ್ರಮವಾಗಿ ಕಾನೂನು ಸುವ್ಯವಸ್ಥೆಯನ್ನು ಬಿಗುಗೊಳಿಸಿದರೂ ಜನರು ಒಂಥರಾ ಭಯದ ವಾತಾವರಣದಲ್ಲಿ ಇದ್ದಂತೆ ಕಂಡು ಬಂತು. ಹಾಗಾಗಿ ಕೆಲವರು ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದು ತೀರ್ಪನ್ನು ನಿರೀಕ್ಷಿಸತೊಡಗಿದರು. ಕೆಲವು ಕಡೆ ಬಸ್ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟುಗಳ ಬಂದ್ ಹೊರತುಪಡಿಸಿದರೆ ಎಲ್ಲೂ ಅಹಿತಕರ ಘಟನೆ ನಡೆಯಲಿಲ್ಲ. ಎಲ್ಲರೂ ಸಮಚಿತ್ತದಿಂದಲೇ ತೀರ್ಪನ್ನು ಸ್ವೀಕರಿಸಿದರು.

ತೀರ್ಪು ಹೊರ ಬಿದ್ದ ಬಳಿಕ ಅಹಿತಕರ ಘಟನೆ ನಡೆಯಬಹುದೋ ಎಂದು ಆತಂಕಿಸಿದ ಗುಂಪು ಒಂದೆಡೆಯಾದರೆ, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿ ಚರ್ಚೆಗೆ ಗ್ರಾಸ ಒದಗಿಸುತ್ತಿದ್ದ ತಂಡವೂ ಸಕ್ರಿಯವಾಗಿತ್ತು.
2010ರಲ್ಲಿ ಅಲಹಾಬಾದ್ ಹೈಕೋರ್ಟ್ ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿ ರವಿವಾರ ತೀರ್ಪು ನೀಡಿತ್ತು. ಆವಾಗ ಕರಾವಳಿ ಯಲ್ಲಿ ಅಘೋಷಿತ ಕರ್ಫ್ಯೂವಿನ ವಾತಾವರಣವಿತ್ತು. ಆದರೆ, ಶನಿವಾರದ ತೀರ್ಪಿನ ಬಳಿಕ ಸರ್ವರೂ ಸಮಚಿತ್ತದಿಂದ ತೀರ್ಪನ್ನು ಸ್ವೀಕರಿಸಿದ ಪರಿಣಾಮ ಪರಿಸ್ಥಿತಿ ಎಂದಿನಂತೆ ಸಹಜವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News