ಸುಪ್ರೀಂ ಕೋರ್ಟ್ ತೀರ್ಪು ರಾಜಕೀಯಕ್ಕೆ ಬಳಸುವವರು ದೇಶದ್ರೋಹಿಗಳು: ಯು.ಟಿ.ಖಾದರ್

Update: 2019-11-09 17:17 GMT

ಮಂಗಳೂರು, ನ.9: ಅಯೋಧ್ಯೆ ವಿವಾದ ಕುರಿತಾದ ಸರ್ವೋಚ್ಛ ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆಬಾಗುತ್ತಾರೆ. ಇದು ದೇಶಕ್ಕೆ ನೀಡಿದ ತೀರ್ಪು. ಆದ್ದರಿಂದ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುವವರು ದೇಶದ್ರೋಹಿಗಳು ಎಂದು ಶಾಸಕ ಹಾಗೂ ಮಾಜಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತೀರ್ಪು ದೇಶದ ಏಕತೆ, ಬಲಿಷ್ಠತೆಗೆ ಬಳಸಬೇಕು. ಬದಲಾಗಿ ಪಕ್ಷದ ಬಲಿಷ್ಠತೆಗೆ ಅಲ್ಲ ಎಂದು ಅವರು ಹೇಳಿದರು. ದೇಶದ ಸರ್ವಜನರು ನ್ಯಾಯಾಲಯದ ಯಾವುದೇ ತೀರ್ಪು ನೀಡಿದರೂ ಅದಕ್ಕೆ ಬದ್ಧ ಎಂದರು.

ನ್ಯಾಯಾಲಯ ಒಬ್ಬರ ಪರ ನೀಡಿದ ತೀರ್ಪಲ್ಲ. ಅಯೋಧ್ಯೆ ವಿವಾದದಿಂದಾಗಿ ನಾವು ಸಣ್ಣವರಿದ್ದಾಗಿನಿಂದಲೂ ಪರಸ್ಪರ ವೈಮನಸ್ಸಿನಲ್ಲೇ ಜೀವಿಸಬೇಕಾದ ಕಾಲಘಟ್ಟವಿತ್ತು. ಇನ್ನು ನಮ್ಮ ಮಕ್ಕಳಾದರೂ ಸೌಹಾರ್ದತೆಯಿಂದ ಬದುಕುವಂತಾಗಲಿ ಎಂದವರು ಹೇಳಿದರು.

ಬಿಜೆಪಿಯವರು ನಡೆಸುತ್ತಿರುವ ಅಪಪ್ರಚಾರಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವ ಮೂಲಕ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜನರು ಉತ್ತರ ನೀಡಲಿದ್ದಾರೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.

ಮನಪಾ ವ್ಯಾಪ್ತಿಯ ಅತ್ಯಂತ ಕಟ್ಟಕಡೆಯ ಪ್ರದೇಶಕ್ಕೂ ಮೂಲಭೂತ ಸೌಲಭ್ಯವನ್ನು ಕಲ್ಪಿಸಿ ಜನರು ಶಾಂತಿಯಿಂದ ನೆಲೆಸಲು ವಾತಾವರಣ ಒದಗಿಸಿದ್ದು ಕಾಂಗ್ರೆಸ್ ಆಡಳಿತ. ಹಿಂದಿನ ಶಾಸಕರಾದ ಜೆ.ಆರ್. ಲೋಬೋ ಹಾಗೂ ಮೊಯ್ದೀನ್ ಬಾವಾ ಅವರು ಸಿದ್ಧರಾಮಯ್ಯ ನೇತೃತ್ವದ ಸರಕಾರವಿದ್ದಾಗ ಸಾಕಷ್ಟು ಅನುದಾನದ ಮೂಲಕ ನಗರಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಬಿಜೆಪಿಯ ಶಾಸಕರು ಗೆದ್ದ ಆರಂಭದ ಎರಡು ಮೂರು ತಿಂಗಳು ಅದಾಗಲೇ ಬಿಡುಗಡೆಯಾಗಿದ್ದ ಅನುದಾನದ ಯೋಜನೆಗಳಿಗೆ ಶಂಕುಸ್ಥಾಪನೆಗಳನ್ನು ನೆರವೇರಿಸಿ ಪ್ರಚಾರ ಪಡೆದುಕೊಂಡರು. ಆದರೆ ಕಳೆದ ಮೂರು ತಿಂಗಳಿಂದೀಚೆಗೆ ಯಾವುದೇ ಶಂಕು ಸ್ಥಾಪನೆಗಳು ಆಗುತ್ತಿಲ್ಲ ಯಾಕೆ ಎಂದು ಅವರು ಪ್ರಶ್ನಿಸಿದರು. ಸಮ್ಮಿಶ್ರ ಸರಕಾರದ ಆಡಳಿತವಾಧಿಯಲ್ಲಿ ಮಹಾನಗರ ಪಾಲಿಕೆಗೆ 125 ಕೋಟಿರೂ. ವಿಶೇಷ ಅನುದಾನ ಹಣಕಾಸು ಅನುಮೋದನೆ ನೀಡಲಾಗಿತ್ತು. ಆದರೆ 100 ದಿನಗಳಲ್ಲಿ ಆ ಅನುದಾನವನ್ನು ಬಿಜೆಪಿಯಿಂದ ಬಿಡುಗಡೆ ಮಾಡಿಸಲು ಯಾಕೆ ಸಾಧ್ಯವಾಗಿಲ್ಲ. ಈ ಚುನಾವಣೆಯಲ್ಲಿ 60 ವಾರ್ಡ್‌ಗಳಿಗೆ ಅವರಿಗೆ ಸೂಕ್ತ ಅಭ್ಯರ್ಥಿಗಳೇ ಇಲ್ಲ. ಅದಕ್ಕಾಗಿ ಕಾಂಗ್ರೆಸ್‌ನ ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ ಎಂದು ಆರೋಪಿಸಿದರು.

ಅಕ್ರಮ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ದಂಡ ಹಾಕುತ್ತಿರುವುದನ್ನು ಉಲ್ಲೇಖಿಸಿ ಮಾತನಾಡಿದ ಯು.ಟಿ.ಖಾದರ್, ಜನಸಾಮಾನ್ಯರು ಊಟ ಮಾಡಿದ ಅನ್ನಕ್ಕೆ ದಂಡ ಹಾಕುವ ಸರಕಾರ ಬಿಜೆಪಿ ಎಂದು ಯು.ಟಿ.ಖಾದರ್ ಆರೋಪಿಸಿದರು.

ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಕೆಪಿಸಿಸಿ ಕಾರ್ಯದರ್ಶಿ ಸೂರಜ್ ಹೆಗ್ಡೆ, ನಾಯಕರಾದ ಶೇಖರ್ ಕುಕ್ಕೇಡಿ, ಭರತ್ ಮುಂಡೋಡಿ, ನಿತ್ಯಾನಂದ ಶೆಟ್ಟಿ, ನಝೀರ್ ಬಜಾಲ್ ಉಪಸ್ಥಿತರಿದ್ದರು.

ನನಗೆ ಬಿಜೆಪಿ ಕೆಟ್ಟ ಪಕ್ಷ ಎಂದು ಹೇಳಿದ್ದೇ ಜನಾರ್ದನ ಪೂಜಾರಿ

ಬಿಜೆಪಿ ಕೆಟ್ಟ ಪಕ್ಷವಲ್ಲ ಎಂದು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಖಾದರ್, ಬಿಜೆಪಿ ಅತ್ಯಂತ ಕೆಟ್ಟ ಪಕ್ಷ ಎಂಬುದಾಗಿ ನನಗೆ ಹೇಳಿಕೊಟ್ಟವರೇ ಜನಾರ್ದನ ಪೂಜಾರಿ. ಅವರು ನನ್ನ ರಾಜಕೀಯ ಗುರು ಎಂದರು. ಬಡವರ ಬಂಧು ಆಗಿದ್ದ, ಭ್ರಷ್ಟಾಚಾರ ರಹಿತ ರಾಜಕೀಯ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆದಿರುವ ಜನಾರ್ದನ ಪೂಜಾರಿಯವರನ್ನು ಅವಾಚ್ಯ ಶಬ್ಧಗಳಿಂದ ಈ ಬಿಜೆಪಿಯವರು ಸಾಕಷ್ಟು ಸಲ ತೆಗಳಿದ್ದಾರೆ. ಪೂಜಾರಿಯವರು ಎಂದೂ ನಮಗೆ ನಾಯಕರೇ. ನಮ್ಮ ತಂದೆಯ ಸ್ಥಾನದಲ್ಲಿದ್ದಾರೆ. ಹಾಗಾಗಿ ಅವರ ಮಾತುಗಳನ್ನು ಸಮಾಧಾನದಿಂದ ಕೇಳುತ್ತಿದ್ದೇವೆ ಎಂದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News