ಮೂಡುಬಿದಿರೆ : ನ.15-16ರಂದು ಎಕ್ಸಲೆಂಟ್‍ನಲ್ಲಿ ಕನ್ನಡ ಹಬ್ಬ

Update: 2019-11-09 17:20 GMT

ಮೂಡುಬಿದಿರೆ : ಇನ್ನೋವೇಟಿವ್ ಲರ್ನಿಂಗ್ ಫೌಂಡೇಶನ್‍ನ ಅಧೀನದಲ್ಲಿ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜು ಪದವಿಪೂರ್ವ ಮತ್ತು ಆಂಗ್ಲಮಾಧ್ಯಮ ಶಾಲೆಯ ವತಿಯಿಂದ ನ.15 ಮತ್ತು 16ರಂದು ಕನ್ನಡಹಬ್ಬ, ಶಾಲಾ ವಾರ್ಷಿಕೋತ್ಸವ, ನೂತನ ವಿದ್ಯಾರ್ಥಿನಿಲಯದ ಉದ್ಘಾಟನೆ ಮತ್ತು ಕಾಲೇಜು ವಾರ್ಷಿಕೋತ್ಸವ ನಡೆಯಲಿದೆ ಎಂದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ತಿಳಿಸಿದರು.

ಅವರು ಶನಿವಾರ ಕಾಲೇಜಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನ.15ರಂದು ಬೆಳಗ್ಗೆ 10 ಗಂಟೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಕನ್ನಡ ಹಬ್ಬವನ್ನು ಉದ್ಘಾಟಿಸಲಿದ್ದಾರೆ. ಯುನಿವರ್ಸಲ್ ಕೋಚಿಂಗ್ ಅಕಾಡಮಿಯ ಅಧ್ಯಕ್ಷ ಉಪೇಂದ್ರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಚಲನಚಿತ್ರ ನಟ ವಿಜಯ ರಾಘವೇಂದ್ರ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳ ಕನ್ನಡ ಕವನಸಂಕಲನ ಮತ್ತು ಇಂಗ್ಲೀಷ್ ಕಾದಂಬರಿ ಹಾಗೂ ವಿದ್ಯಾರ್ಥಿಗಳ ಆಹ್ವಾನಿತ 500 ಕವನಗಳ ಪೈಕಿ ಆಯ್ದ 25 ಕವನಗಳ ಸಂಕಲನವನ್ನು ಬಿಡುಗಡೆಗೊಳಿಸಲಿದ್ದಾರೆ. ಬಳಿಕ ರಾಜ್ಯಮಟ್ಟದ ಕವಿಗೋಷ್ಠಿ ನಡೆಯಲಿದೆ. ಖ್ಯಾತ ಲೇಖಕ ಡಾ. ನರೇಂದ್ರ ರೈ ದೇರ್ಲ ಸಮನ್ವಯಕಾರರಾಗಿ ಭಾಗವಹಿಸಲಿದ್ದಾರೆ. ಬಳಿಕ ಜನಪ್ರಿಯ ಗಾಯಕರಿಂದ `ಮಧುರ ಗಾಯನ' ನಡೆಯಲಿದೆ.

ಸಂಜೆ ಶಾಲಾ ವಾರ್ಷಿಕೋತ್ಸವ ನಡೆಯಲಿದ್ದು, ಹೈಕೋರ್ಟ್‍ನ ಹಿರಿಯ ವಕೀಲ ಎಚ್.ಎಸ್ ಚಂದ್ರಮೌಳಿ, ಸರ್ಕಾರದ ಮುಖ್ಯ ಸಚೇತಕ ವಿ.ಸುನಿಲ್ ಕುಮಾರ್, ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದಿನೇಶ್ ಚೌಟ ಭಾಗವಹಿಸಲಿದ್ದಾರೆ.

ನ.16ರಂದು ಬೆಳಗ್ಗೆ 10ಕ್ಕೆ `ರಾಮಚಂದ್ರ' ವಿದ್ಯಾರ್ಥಿನಿಲಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಶ್ರೀ ಕ್ಷೇತ್ರ ಕನಕಗಿರಿಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ್ ಅಜಿಲ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಭಾಗವಹಿಸಲಿದ್ದಾರೆ. ಜೈನ್ ಮಿಲನ್ ವಲಯ 8ರ ಅಧ್ಯಕ್ಷ ಪುಷ್ಪರಾಜ್ ಜೈನ್, ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಉಪಸ್ಥಿತರಿರುವರು.

ಬಳಿಕ ಪೋಷಕರು ಮತ್ತು ಹಿರಿಯ ವಿದ್ಯಾಥಿಗಳ ಸಮ್ಮಿಲನ ನಡೆಯಲಿದ್ದು ಶ್ರೀ ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಗೋಗಿ ಭಾಗವಹಿಸಲಿದ್ದಾರೆ. ಸಾಯಂಕಾಲ 6ರಿಂದ ಕಾಲೇಜು ವಾರ್ಷಿಕೋತ್ಸವ ನಡೆಯಲಿದ್ದು ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಉಮಾನಾಥ ಕೋಟ್ಯಾನ್, ಮೈಸೂರು ಜೆಎಸ್‍ಎಸ್ ಕಾಲೇಜಿನ ಪ್ರಾಂಶುಪಾಲ ಕೆ.ಎಸ್ ಸುರೇಶ್ ಭಾಗವಹಿಸಲಿದ್ದಾರೆ.

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್, ಪ್ರಾಂಶುಪಾಲ ಪ್ರದೀಪ್‍ಕುಮಾರ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯ ಗುರುಪ್ರಸಾದ್ ಶೆಟ್ಟಿ, ಉಪನ್ಯಾಸಕ ಪುರುಷೋತ್ತಮ ತುಳುಪುಳೆ, ಸಾರ್ವಜನಿಕ ಸಂಪರ್ಕಾಧಿಕಾರಿ ಹರೀಶ್ ಶೆಟ್ಟಿ ಸುದ್ದಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News