ಬಂಧನದಲ್ಲಿರುವ ಉಯಿಘರ್ ಮುಸ್ಲಿಮರ ಮನೆಗಳಲ್ಲಿ ಚೀನಿ ಅಧಿಕಾರಿಗಳ ಬಲವಂತದ ವಾಸ್ತವ್ಯ

Update: 2019-11-09 18:15 GMT

ಹೊಸದಿಲ್ಲಿ,ನ.9: ನಿರ್ಬಂಧಿತ ಶಿಬಿರಗಳಲ್ಲಿ ಕೊಳೆಯುತ್ತಿರುವ ಚೀನಾದ ಝಿಂಜಿಯಾಂಗ್ ಪ್ರಾಂತ್ಯದ ಉಯಿಘರ್ ಮುಸ್ಲಿಮರ ಪತ್ನಿಯರು ತಮ್ಮ ಮನೆಗಳಲ್ಲಿ ಚೀನಿ ಅಧಿಕಾರಿಗಳು ಮಲಗುತ್ತಿರುವ ಅನಿವಾರ್ಯ ಸಂಕಟವನ್ನು ಅನುಭವಿಸುತ್ತಿದ್ದಾರೆ. ಬಂಧಿತರ ಕುಟುಂಬ ಸದಸ್ಯರ ಮೇಲೆ ಅವರ ಮನೆಗಳಲ್ಲಿಯೇ ನಿಗಾಯಿರಿಸಲು ಈ ಅಧಿಕಾರಿಗಳನ್ನು ಚೀನಿ ಸರಕಾರವು ನಿಯೋಜಿಸಿದೆ.

ಹೀಗೆ ನಿಗಾ ಇಡಲು ಆಗಮಿಸುವ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಕಿರುಕುಳವನ್ನು ಅನುಭವಿಸುತ್ತಿರುವ ಉಯಿಘರ್ ಅಲ್ಪಸಂಖ್ಯಾತ ಸಮುದಾಯದ ಕುಟುಂಬಗಳ ಸದಸ್ಯರೊಂದಿಗೆ ಹಾಸಿಗೆಗಳನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು ಈ ಬಲವಂತದ ವಾಸ್ತವ್ಯವು ಒಂದು ವಾರದವರೆಗೂ ಮುಂದುವರಿಯುತ್ತಿದೆ.

ಈ ನಿಗಾ ಇಡುವ ಪ್ರಕ್ರಿಯೆಯು ಝಿಂಜಿಯಾಂಗ್ ಪ್ರದೇಶದಲ್ಲಿಯ ಮುಸ್ಲಿಮರ ವ್ಯವಸ್ಥಿತ ದಮನದ ಭಾಗವಾಗಿದೆ ಎಂದು ಮಾನವ ಹಕ್ಕು ಕಾರ್ಯಕರ್ತರು ಆರೋಪಿಸಿದ್ದಾರೆ. ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿರುವ ಇಲ್ಲಿಯ ಹತ್ತು ಲಕ್ಷಕ್ಕಿಂತಲೂ ಅಧಿಕ ಉಯಿಘರ್ ಮುಸ್ಲಿಮರನ್ನು ರಹಸ್ಯ ಪುನರ್-ಶಿಕ್ಷಣ ಶಿಬಿರಗಳಲ್ಲಿ ನಿರಂಕುಶವಾಗಿ ಕೂಡಿ ಹಾಕಲಾಗಿದೆ ಎಂದು ಮಾನವ ಹಕ್ಕು ಗುಂಪುಗಳು ಆರೋಪಿಸಿವೆ.

ಬಂಧಿಸಲ್ಪಡದ ಉಯಿಘರ್‌ಗಳು ಸದಾ ಸರಕಾರದ ಕಣ್ಗಾವಲಿನಲ್ಲಿಯೇ ಬದುಕುತ್ತಿದ್ದಾರೆ.

ಕಳೆದ ವರ್ಷದಿಂದ ಉಯಿಘರ್ ಕುಟುಂಬಗಳು ಸರಕಾರಿ ಅಧಿಕಾರಿಗಳನ್ನು ತಮ್ಮ ಮನೆಗಳಿಗೆ ಆಹ್ವಾನಿಸಿ ತಮ್ಮ ಬದುಕು ಮತ್ತು ರಾಜಕೀಯ ದೃಷ್ಟಿಕೋನದ ಬಗ್ಗೆ ಅವರಿಗೆ ಮಾಹಿತಿಗಳನ್ನು ಒದಗಿಸಬೇಕಿದೆ,ಜೊತೆಗೆ ಈ ಅಧಿಕಾರಿಗಳು ಬೋಧಿಸುವ ರಾಜಕೀಯ ಸಿದ್ಧಾಂತವನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.

‘ಜೊತೆಗೂಡಿ ಮತ್ತು ಕುಟುಂಬವಾಗಿ ’ಎಂದು ತಾನು ಬಣ್ಣಿಸಿರುವ ಕಾರ್ಯಕ್ರಮದ ಅಂಗವಾಗಿ ಪ್ರತಿ ಎರಡು ತಿಂಗಳಿಗೆ ಉಯಿಘರ್ ಮನೆಗಳಲ್ಲಿ ವಾಸ್ತವ್ಯ ಹೂಡಲು ಹತ್ತು ಲಕ್ಷಕ್ಕೂ ಅಧಿಕ ಗುಪ್ತಚರರನ್ನು ಚೀನಾ ನಿಯೋಜಿಸಿದೆ. ಇವರಲ್ಲಿ ಹೆಚ್ಚಿನವರು ಪುರುಷರಾಗಿದ್ದು ಬಹುಸಂಖ್ಯಾತ ಹಾನ್ ಜನಾಂಗಕ್ಕೆ ಸೇರಿದವರಾಗಿದ್ದಾರೆ.

ಝಿಂಜಿಯಾಂಗ್‌ನ ಮುಸ್ಲಿಮರ ಮೇಲಿನ ತನ್ನ ಈ ಆಕ್ರಮಣವನ್ನು ಸರಕಾರವು 2014ರಲ್ಲಿ ಉಗ್ರಗಾಮಿಗಳು ನಡೆಸಿದ್ದರೆನ್ನಲಾದ ಸರಣಿ ದಾಳಿಗಳ ಹಿನ್ನೆಲೆಯಲ್ಲಿ ‘ಭಯೋತ್ಪಾದನೆಯ ವಿರುದ್ಧದ ಯುದ್ಧ ’ಎಂದು ಬಿಂಬಿಸುತ್ತಿದೆ. ನಿರ್ಬಂಧಿತ ಶಿಬಿರಗಳ ಅಸ್ತಿತ್ವವನ್ನು ಆರಂಭದಲ್ಲಿ ನಿರಾಕರಿಸಿದ್ದ ಸರಕಾರವು ಬಳಿಕ ಅವುಗಳನ್ನು ಸ್ವಯಿಚ್ಛೆಯ ‘ವೃತ್ತಿ ತರಬೇತಿ ಕೇಂದ್ರ ’ಗಳು ಎಂದು ಹೇಳಿಕೊಳ್ಳುತ್ತಿದೆ.

ಶಿಬಿರಗಳಲ್ಲಿ ಬಂಧಿತರನ್ನು ಹಿಂಸೆ,ವೈದ್ಯಕೀಯ ಪ್ರಯೋಗಗಳು ಮತ್ತು ಮಹಿಳೆಯರನ್ನು ಸಾಮೂಹಿಕ ಅತ್ಯಾಚಾರಗಳಿಗೆ ಗುರಿಪಡಿಸಲಾಗುತ್ತಿದೆ ಎಂದು ಬಿಡುಗಡೆಗೊಂಡ ಉಯಿಘರ್‌ಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News