×
Ad

ಉಡುಪಿ ನಗರದಲ್ಲಿ ಬೃಹತ್ ಡಯಾಬಿಟೀಸ್ ಜಾಥಾ

Update: 2019-11-10 17:35 IST

ಉಡುಪಿ, ನ.10: ಉಡುಪಿ ಆದರ್ಶ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಎನ್‌ಸಿಡಿ ಘಟಕ ಹಾಗೂ ಪೂರ್ಣಪ್ರಜ್ಞಾ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಡಯಾಬಿಟೀಸ್ ದಿನದ ಅಂಗವಾಗಿ ಬೃಹತ್ ಡಯಾ ಬಿಟೀಸ್ ಜಾಥಾವನ್ನು ರವಿವಾರ ಉಡುಪಿ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಅಜ್ಜರಕಾಡು ಜಿಲ್ಲಾಸ್ಪತ್ರೆಯ ಆವರಣದಲ್ಲಿ ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಮಾತನಾಡಿ, ಸೈಲೆಂಟ್ ಕಿಲ್ಲರ್ ಆಗಿರುವ ಮಧುಮೇಹ ಕಾಯಿಲೆಯು ದೇಹದ ಎಲ್ಲ ಅಂಗಾಂಗಳಗಳ ಮೇಲೆ ದುಷ್ಪಾರಿಣಾಮ ಬೀರುತ್ತದೆ. ದೈಹಿಕ ಚಟುವಟಿಕೆ, ಕಾಲಕಾಲಕ್ಕೆ ಆರೋಗ್ಯ ತಪಾಸಣೆ, ಆಹಾರ ಪದ್ಧತಿಯ ಅಳವಡಿಕೆಯಿಂದ ಮಧುಮೇಹ ಕಾಯಿಲೆ ಯನ್ನು ನಿಯಂತ್ರಿಸಬಹುದಾಗಿ ಎಂದು ತಿಳಿಸಿದರು.

ಆದರ್ಶ ಆಸ್ಪತ್ರೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಉಡುಪಿ ಶಾಸಕ ಕೆ.ರಘುಪತಿ ಭಟ್, ಆಯುಷ್ಮಾನ್ ಭಾರತ್ ಯೋಜನೆ ಜಾರಿಯಾದ ಬಳಿಕ ಸರಕಾರಿ ಜಿಲ್ಲಾಸ್ಪತ್ರೆಗಳು ಬಲವರ್ಧನೆಗೊಳ್ಳುತ್ತಿವೆ. ಸರಕಾರಿ ಮೆಡಿಕಲ್ ಕಾಲೇಜುಗಳಿಲ್ಲದ ಜಿಲ್ಲೆಯಲ್ಲಿ 3 ಎ ರೆಫರಲ್ ಲೆಟರ್ ಕಡ್ಡಾಯ ಎಂಬ ನಿಯಮವನ್ನು ಕೈಬಿಡಲು ಅಧಿಕಾರಿಗಳು ಈಗಾಗಲೇ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ತಪ್ಪಾದ ಆಹಾರ ಕ್ರಮ, ವ್ಯಾಯಮವಿಲ್ಲ ಜೀವನ, ಒತ್ತಡದ ಬದುಕು, ವಂಶಪಾರಂಪರೆ ಸೇರಿದಂತೆ ಅನೇಕ ಕಾರಣದಿಂದ ಮಧುಮೇಹ ಕಾಯಿಲೆ ಬರುತ್ತದೆ. ಚೀನಾ ನಂತರ ಅತಿಹೆಚ್ಚು ಮಧುಮೇಹಿ ಗಳು ಹೊಂದಿರುವ ದೇಶ ಭಾರತ. ಸುಮಾರು 7 ಕೋಟಿ ಜನರು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದು, 7 ಕೋಟಿ ಮಂದಿ ಮಧುಮೇಹ ಕಾಯಿಲೆಯ ಆರಂಭಿಕ ಹಂತದಲ್ಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ದಿನಕರ್ ಬಾಬು, ಸದಸ್ಯೆ ಗೀತಾಂಜಲಿ ಸುವರ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶೋಕ್, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ, ಬಂಟಕಲ್ಲು ತಾಂತ್ರಿಕ ಕಾಲೇಜಿನ ಕಾರ್ಯದರ್ಶಿ ರತ್ನಕುಮಾರ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಎಂ.ಎ. ಗಫೂರ್, ಮಟ್ಟಾರು ರತ್ನಾಕರ ಹೆಗ್ಡೆ, ಉದಯ ಕುಮಾರ್ ಶೆಟ್ಟಿ, ಉಮೇಶ್ ಶೆಟ್ಟಿ, ಅಜಿತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಅಜ್ಜರಕಾಡು ಜಿಲ್ಲಾಸ್ಪತ್ರೆಯಿಂದ ಹೊರಟ ಜಾಥವು ಜೋಡುಕಟ್ಟೆ, ಡಯಾನ ಸರ್ಕಕಲ್, ಕೆ.ಎಂ.ಮಾರ್ಗವಾಗಿ ಆದರ್ಶ ಆಸ್ಪತ್ರೆಯಲ್ಲಿ ಸಮಾಪನೆಗೊಂಡಿದೆ. ಇದರಲ್ಲಿ ನಗರದ ವಿವಿಧ ನರ್ಸಿಂಗ್ ಹಾಗೂ ಪದವಿ ಕಾಲೇಜುಗಳ ಸುಮಾರು 2,000 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಡಯಾಬಿಟೀಸ್ ಖಾಯಿಲೆಯ ಕುರಿತು ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಫಲಕಗಳನ್ನು ಪ್ರದರ್ಶಿಸಿದರು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವ್ಯಾಯಾಮಗಳ ಪ್ರಾತ್ಯಕ್ಷತೆ ನಡೆಯಿತು. ವಿದ್ಯಾರ್ಥಿಗಳಿಗೆ ಡಯಾಬಿಟೀಸ್ ಖಾಯಿಲೆ ಕುರಿತು ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News