​ಅಯೋಧ್ಯೆ ತೀರ್ಪು: ದೆಹಲಿಯ ಶಾಂತಿಸಭೆಯಲ್ಲಿ ಪೇಜಾವರ ಶ್ರೀ

Update: 2019-11-10 14:43 GMT

ಉಡುಪಿ, ನ.10: ಸುಪ್ರೀಂ ಕೋರ್ಟ್ ನೀಡಿದ ಅಯೋಧ್ಯೆ ತೀರ್ಪಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ರವಿವಾರ ನಡೆದ ಹಿಂದೂ ಸಂತರು, ಮುಸ್ಲಿಂ ಧಾರ್ಮಿಕ ಮುಖಂಡರ ಶಾಂತಿ ಸಭೆಯಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪಾಲ್ಗೊಂಡರು.

ಅಯೋಧ್ಯೆ ಕುರಿತು ತೀರ್ಪು ಬರುವ ಮೊದಲು ತೀರ್ಪು ಬಂದ ಬಳಿಕ ಯಾವ ಕ್ರಮ ಕೈಗೊಳ್ಳಬೇಕು ಎಂಬ ಉದ್ದೇಶದಿಂದ ಪ್ರಮುಖ ಸಂತರು, ವಿಶ್ವ ಹಿಂದೂ ಪರಿಷದ್ ಮುಖಂಡರ ಸಭೆಯನ್ನು ಈ ದಿನಕ್ಕೆ ನಿಗದಿ ಪಡಿಸಲಾಗಿತ್ತು. ಇದೀಗ ತೀರ್ಪು ಪ್ರಕಟವಾಗಿರುವುದರಿಂದ ಆ ಸಭೆಯನ್ನು ಎರಡು ಧರ್ಮಗಳ ಮುಖಂಡರ ಶಾಂತಿ ಸಭೆಯಾಗಿ ನಡೆಸಲಾಯಿತು.

ಶನಿವಾರ ಉಡುಪಿಯಲ್ಲಿದ್ದ ಸ್ವಾಮೀಜಿ ಈ ಹಿನ್ನೆಲೆಯಲ್ಲಿ ರವಿವಾರ ಮಂಗಳೂರಿನಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿ ಸಭೆಯಲ್ಲಿ ಭಾಗವಹಿಸಿದರು. ಪ್ರಧಾನ ಮಂತ್ರಿ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವ ದಲ್ಲಿ ಈ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಮಂದಿರ ನಿರ್ಮಾಣ ಕುರಿತು ಸಮಗ್ರ ಸಮಿತಿಯನ್ನು ರಚಿಸಲು ನಿರ್ಧರಿಸಲಾಯಿತು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೇಜಾವರ ಸ್ವಾಮೀಜಿ, ದೇಶದಲ್ಲಿ ಶಾಂತಿಯನ್ನು ಕಾಪಾಡಲು ಆಯಾ ಸಮುದಾಯಗಳಿಗೆ ತಿಳುವಳಿಕೆ ನೀಡಬೇಕು. ಯಾವುದೇ ಪ್ರದೇಶದಲ್ಲೂ ಗಲಭೆ, ಘರ್ಷಣೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ಕರೆ ನೀಡಲಾಯಿತು. ಶಾಂತಿ, ಸಾಮರಸ್ಯ ಕಾಪಾಡಲು ಸಭೆ ನಿರ್ಣಯಿಸಿತು ಎಂದು ತಿಳಿಸಿದರು.

ಕರ್ನಾಟಕದಿಂದ ಪೇಜಾವರ ಸ್ವಾಮೀಜಿ, ಶ್ರೀ ಅದಿಚುಂಚನಗಿರಿ ಮತ್ತು ಶ್ರೀ ಸುತ್ತೂರು ಮಠಾಧೀಶರು ಸೇರಿದಂತೆ ದೇಶದ ಒಟ್ಟು 40 ಮಂದಿ ಪ್ರಮುಖರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News