ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಮಿಲಾದುನ್ನಬಿ ಆಚರಣೆ

Update: 2019-11-10 15:03 GMT

ಉಡುಪಿ, ನ.10: ಪ್ರವಾದಿ ಮುಹಮ್ಮದ್ ಮುಸ್ತಪಾ (ಸಅ) ಅವರ ಜನ್ಮ ದಿನಾಚರಣೆ ಮಿಲಾದುನ್ನಬಿ ಪ್ರಯುಕ್ತ ಇಂದು ಉಡುಪಿ ಜಿಲ್ಲೆಯಾದ್ಯಂತ ವಿವಿಧ ಮಸೀದಿಗಳ ವ್ಯಾಪ್ತಿಯಲ್ಲಿ ಸಂಭ್ರಮ, ಸಡಗರದ ಸಂದಲ್ ಮೆರವಣಿಗೆ ಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾಪು ಪೊಲಿಪು ಮಸೀದಿಯಿಂದ ಆರಂಭಗೊಂಡ ಸಂದಲ್ ಮೆರವಣಿಗೆ ಕೊಪ್ಪಲಂಗಡಿ ಮಸೀದಿಯ ಮುಂಭಾಗದಲ್ಲಿ ಕೊಂಬಗುಡ್ಡೆ, ಮಲ್ಲಾರು, ಮಜೂರು, ಕೊಪ್ಪಲಂಗಡಿ ಮಸೀದಿ ವ್ಯಾಪ್ತಿಯ ಮೆರವಣಿಗೆ ಜೊತೆ ಸಂಗಮ ಗೊಂಡಿತು. ಬಳಿಕ ಈ ಮೆರವಣಿಗೆಯು ಪೊಲಿಪು ಮಸೀದಿಯಲ್ಲಿ ಸಮಾಪನ ಗೊಂಡಿತು. ಮೆರವಣಿಗೆಯಲ್ಲಿ ಅಲಂಕೃತಗೊಂಡ ವಾಹನಗಳು, ವಿವಿಧ ಮದರಸ ವಿದ್ಯಾರ್ಥಿಗಳು, ಫ್ ತಂಡಗಳು ಬಾಗವಹಿಸಿದ್ದವು.

ಮೂಳೂರು ಜುಮ್ಮಾ ಮಸೀದಿಯಲ್ಲಿ ಉಚ್ಚಿಲ, ಭಾಸ್ಕರ ನಗರ, ಪೊಲ್ಯ, ಮೂಳೂರು ಮಸೀದಿ, ಕುಂಜೂರು ಮದರಸ, ಮೂಳೂರು ಅಲ್ ಇಹ್ಸಾನ್ ವ್ಯಾಪ್ತಿಯ ಮೆರವಣಿಗೆಯು ಮೂಳೂರು ಪೇಟೆಯಲ್ಲಿ ಸಂಗಮಗೊಂಡು, ಮೂಳೂರು ದರ್ಗಾದಲ್ಲಿ ಸಮಾಪನಗೊಂಡಿತು. ಇದರಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ಪಡುಬಿದ್ರಿಯಲ್ಲಿ ಕಂಚಿನಡ್ಕ ಮಸೀದಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಪಡುಬಿದ್ರಿ ಪೇಟೆ ಮೂಲಕ ಕೇಂದ್ರ ಮಸೀದಿಯಲ್ಲಿ ಮೆರವಣಿಗೆ ಸಮಾಪನಗೊಂಡಿತು. ಮೆರವಣಿಗೆಯಲ್ಲಿ ಮದರಸ ವಿದ್ಯಾರ್ಥಿಗಳ ಸ್ಕೌಟ್ ತಂಡ ಆಕರ್ಷಕ ಪಥ ಸಂಚಲನ ಗಮನ ಸೆಳೆಯಿತು. ಎರ್ಮಾಳು, ಪಲಿಮಾರು -ಇನ್ನಾ, ಹೆಜಮಾಡಿಯಲ್ಲೂ ಮಿಲಾದುನ್ನಬಿ ಜಾಥಾ ನಡೆಯಿತು.

ದೊಡ್ಡಣಗುಡ್ಡೆ ರಹ್ಮಾನಿಯ ಜುಮಾ ಮಸೀದಿಯಲ್ಲಿ ಸ್ಥಳೀಯ ಖತೀಬ್ ಅಬ್ದುಲ್ ಸಲಾಂ ಮದನಿ ದುವಾ ನೆರವೇರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್, ಉಪಾಧ್ಯಕ್ಷ ಅಮಾನುಲ್ಲಾ ಸಾಹೇಬ್, ಎಸ್‌ವೈಎಸ್ ರಾಜ್ಯ ಸದಸ್ಯ ಹಂಝಾತ್ ಕೋಡಿ ಹೆಜಮಾಡಿ ಉಪಸ್ಥಿತರಿದ್ದರು. ಬಳಿಕ ಮಿಲಾದುನ್ನಬಿ ಮೆರವಣಿಗೆಯು ಕರಂಬಳ್ಳಿ, ಗುಂಡಿಬೈಲು ಶಾಲಾ ಮೈದಾನ ಮಾರ್ಗವಾಗಿ ಮಸೀದಿಯಲ್ಲಿ ಸಮಾಪಗೊಂಡಿತು. ಇದರಲ್ಲಿ ದಫ್ ತಂಡ, ಮದ್ರಸ ಮಕ್ಕಳು, ಮಸೀದಿಯ ಆಡಳಿತ ಕಮಿಟಿ ಸದಸ್ಯರು, ಯಂಗ್‌ಮೆನ್ಸ್ ಅಸೋಸಿಯೇಶನ್ ಪದಾಧಿಕಾರಿಗಳು, ಎಸ್‌ವೈಎಸ್, ಎಸ್‌ಎಸ್‌ಎಫ್, ಎಸ್‌ಬಿಎಸ್ ಸಂಘಟನೆಯವರು ಮೊದಲಾದವರಿದ್ದರು.

ತೋನ್ಸೆ ಹೂಡೆ ಎಸ್‌ಎಸ್‌ಎಫ್ ಘಟಕ ವತಿಯಿಂದ ಹೂಡೆಯಲ್ಲಿ ಹಮ್ಮಿಕೊಳ್ಳಲಾದ ಸ್ವಲಾತ್ ಮೆರವಣಿಗೆಗೆ ಹೂಡೆ ದಾರುಸ್ಸಲಾಂ ಮದ್ರಸ ವಠಾರದಲ್ಲಿ ಚಾಲನೆ ನೀಡಲಾಯಿತು. ಬಳಿಕ ಮೆರವಣಿಗೆಯು ಹೂಡೆಯ ಹಝ್ರತ್ ಶೇಕ್ ಶಬೀರ್ ವಲಿಯುಲ್ಲಾ ದರ್ಗಾಕ್ಕೆ ತೆರಳಿ ಬಳಿಕ ಹೂಡೆ ಪೇಟೆಯಲ್ಲಿ ಸಾಗಿ ಮರಳಿ ದಾರುಸ್ಸಾಂ ವಠಾರದಲ್ಲಿ ಸಮಾಪ್ತಿಗೊಂಡಿತು.

ಗಂಗೊಳ್ಳಿ ಕೇಂದ್ರ ಜುಮಾ ಮಸೀದಿಯಿಂದ ಹೊರಟ ಸಂದಲ್ ಮೆರವಣಿಗೆಯು ಮುಖ್ಯರಸ್ತೆ, ಬಂದರ್ ಮಾರ್ಗವಾಗಿ ಮರಳಿ ಮಸೀದಿಯಲ್ಲಿ ಸಮಾಪನಗೊಂಡಿತು. ಮೆರವಣಿಗೆಗೆ ಧರ್ಮಗುರುಗಳಾದ ಅಬ್ದುರ್ರಹ್ಮಾನ್ ಸಖಾಫಿ ಹಾಗೂ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಚಾಲನೆ ನೀಡಿದರು. ಇದರಲ್ಲಿ ಗಂಗೊಳ್ಳಿ ಜಮಾತುಲ್ ಮುಸ್ಲಿಮೀನ್ ಅಧ್ಯಕ್ಷ ಸಿ.ಎಂ.ಹಸೈನಾರ್, ಮಾಜಿ ಅಧ್ಯಕ್ಷ ಪೂಕೋಯಾ ರಫೀಕ್, ಮಿಲಾದುನ್ನಬಿ ಸಮಿತಿ ಅಧ್ಯಕ್ಷ ಮುಹಮ್ಮದ್ ಝಿಯಾವುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.

ಮೆರವಣಿಗೆಯಲ್ಲಿ ಸ್ವಚ್ಛತೆಯ ಪಾಠ

ಪಡುಬಿದ್ರಿಯಲ್ಲಿ ನಡೆದ ಮೆರವಣಿಗೆಯ ಸಂದರ್ಭದಲ್ಲಿ ನೀಡಲಾದ ತಂಪು ಪಾನೀಯಗಳಿಂದ ಅಲ್ಲಲ್ಲಿ ಕಸ ಉಂಟಾಗಿದ್ದು, ಇದನ್ನು ಎಸ್‌ವೈಎಸ್ ಪಡುಬಿದ್ರಿ ಶಾಖೆಯ ವತಿಯಿಂದ ನಿಯೋಜಿಸಲಾದ ವಾಹನದ ಮೂಲಕ ಸ್ವಚ್ಛಗೊಳಿಸಲಾಯಿತು.

ಮೆರವಣಿಗೆ ಸಾಗಿ ಬಂದ ಮಾರ್ಗದಲ್ಲಿ ಮಕ್ಕಳಿಗೆ ಅಲ್ಲಿಲ್ಲಿ ಶರಬತ್, ಐಸ್‌ಕ್ರೀಂ, ಸಿಹಿತಿಂಡಿಗಳನ್ನು ವಿತರಿಸಲಾಗಿತ್ತು. ಇದರಿಂದ ಉಂಟಾದ ಪೇಪರ್ ಗ್ಲಾಸ್, ಐಸ್‌ಕ್ರೀಂ ಕಪ್ ಸೇರಿದಂತೆ ವಿವಿಧ ಕಸಗಳನ್ನು ಕಾರ್ಯಕರ್ತರು ಸಂಗ್ರಹಿಸಿ ಸ್ವಚ್ಚತೆ ಮಾಡುವ ಮೂಲಕ ಗಮನ ಸೆಳೆದರು.

ಸ್ಥಳೀಯ ಹಿಂದೂಗಳಿಂದ ನೀರಿನ ವ್ಯವಸ್ಥೆ

ಕಾಪು ಪೇಟೆಯಲ್ಲಿ ಸಾಗಿ ಬಂದ ಮಿಲಾದುನ್ನಬಿ ಮೆರವಣಿಗೆಯಲ್ಲಿ ಧಣಿದು ಬಂದ ಮುಸ್ಲಿಮರಿಗೆ ಸ್ಥಳೀಯ ಹಿಂದೂಗಳು ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ ಕೋಮು ಸೌಹಾರ್ದತೆ ಮೆರೆದರು.

ಕಾಪು ಪುರಸಭೆಯ ಸದಸ್ಯರು, ಕಾಪು ಪೇಟೆಯ ವರ್ತಕರು ಮೆರವಣಿಗೆಯಲ್ಲಿ ಸಾಗಿ ಬಂದವರಿಗೆ ತಂಪು ಪಾನೀಯ, ನೀರಿನ ಬಾಟಲಿಗಳನ್ನು ಹಂಚಿದರು. ಅದೇ ರೀತಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮೀಲಾದುನ್ನಬಿ ಜಾಥಾದಲ್ಲಿ ಪಾಲ್ಗೊಂಡು, ಶುಭಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News