ಎಲ್ಲಾ ಧರ್ಮದವರನ್ನು ಸ್ನೇಹಿತರಂತೆ ಪ್ರೀತಿಸಿ: ಅನ್ಸಾರ್ ಸಖಾಫಿ

Update: 2019-11-10 15:39 GMT

ಸಿದ್ಧಕಟ್ಟೆ: ನೆರೆಹೊರೆಯವರು ಯಾವುದೇ ಧರ್ಮದವರಾಗಿದ್ದರೂ, ಅವರನ್ನು ಪ್ರೀತಿಯಿಂದ ಕಾಣಬೇಕು. ಆಗಲೇ ಪ್ರವಾದಿಯ ಸಂದೇಶ ನಿಜವಾಗಲು ಸಾಧ್ಯ ಎಂದು ಜಿ.ಎಸ್. ಅನ್ಸಾರ್ ಸಖಾಫಿ ಅಭಿಪ್ರಾಯಪಟ್ಟರು.

ಕೆರೆಬಳಿ ಮುಹಿಯ್ಯದ್ದೀನ್ ಜುಮಾ ಮಸೀದಿ, ಕುವ್ವತ್ತುಲ್ ಇಸ್ಲಾಂ ಮದರಸ ಕಾಲನಿ ಹಾಗೂ ಮುಹಿಯ್ಯದ್ದೀನ್‌ನ ಜುಮಾ ಮಸ್ಜಿದ್ ಪುಚ್ಚ  ಮೊಗರು ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಪ್ರವಾದಿ ಮಹಮ್ಮದ್ ಮಸ್ತಫಾ (ಸ.ಅ) ಅವರ  ಜನ್ಮ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಪ್ರವಾದಿಗಳು ಧರ್ಮದ ಹಂಗಿಲ್ಲದೇ, ಎಲ್ಲಾ ಜೀವರಾಶಿಗಳನ್ನು ಸಮಾನವಾಗಿ ಕಾಣುವಂತೆ ಹೇಳಿದ್ದಾರೆ. ಪ್ರತಿಯೊಬ್ಬರನ್ನು ಗೌರವದಿಂದ ನೋಡಬೇಕು ಎಂಬುದು ಅವರ ಸಂದೇಶವಾಗಿತ್ತು. ಹೀಗಾಗಿ ನಾವೆಲ್ಲರೂ ಅದರಂತೆ ನಡೆದು, ಅವರ ಸಾರಿದಂತೆ ಬದುಕಬೇಕಿದೆ ಎಂದು ಹೇಳಿದರು.

ಪ್ರತಿವರ್ಷದಂತೆ ಜನ್ಮ ದಿನಾಚರಣೆಯ ಅಂಗವಾಗಿ ರ‍್ಯಾಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲ್ನಡಿಗೆಯಲ್ಲೇ 3 ಕಿ.ಮೀ ಸಾಗಿದ ರ‍್ಯಾಲಿಯಲ್ಲಿ ಮದರಸ ವಿದ್ಯಾರ್ಥಿಗಳು, ಗಣ್ಯರು ಸೇರಿದಂತೆ ಸುಮಾರು 700ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಕೆರೆಬಳಿ ಮದರಸ ವಿದ್ಯಾರ್ಥಿಗಳ ದಫ್ ಪ್ರದರ್ಶನ ರ‍್ಯಾಲಿಗೆ ಮೆರುಗು ತಂದಿತು. ಅಲ್ಲಲ್ಲಿ ಸರ್ವಧರ್ಮೀಯರಿಗೂ ಸಿಹಿ ತಿಂಡಿ ಹಾಗೂ ಪಾನೀಯಗಳನ್ನು ವಿತರಿಸಲಾಯಿತು.

ಪುಚಮೊಗರು ಮಸೀದಿಯ ಖತೀಬ್ ಅಬೂರಯ್ಯಾನ್ ಮದನಿ, ಕೊಲೋನಿ ಮದರಸ ಮುಅಲ್ಲಿಂ ಅಬ್ದುಲ್ ರಝಾಕ್ ಸದಿ, ಕೆರೆಬಳಿ ಮಸೀದಿಯ ಉಸ್ತಾದರಾದ ಸದಕತ್ತಲ್ಲಾ ಮದನಿ, ಉಸ್ಮಾನ್ ಹಿಮಮಿ ಕೆರೆಬಳಿ ಮಸೀದಿ ಅಧ್ಯಕ್ಷ  ಕೆ. ಮುಹಮ್ಮದ್ ಶರೀಫ್, ಪುಚ್ಚೊಗರು ಮಸೀದಿ ಅಧ್ಯಕ್ಷ  ಎಸ್. ಹಸನಬ್ಬ, ಕಾಲನಿ ಮದರಸ ಅಧ್ಯಕ್ಷ ಇಬ್ರಾಹಿಂ ಕುಂಞಿ ಮತ್ತಿತ್ತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News