ಪ್ರತೀ ರಾಜ್ಯದಲ್ಲಿ ಕೌಶಲ್ಯ ಕೇಂದ್ರ ಸ್ಥಾಪನೆ: ಮುಖ್ತಾರ್ ಅಬ್ಬಾಸ್ ನಖ್ವಿ

Update: 2019-11-10 16:23 GMT

ಲಕ್ನೊ, ನ.10: ದೇಶೀಯ ಕುಶಲಕರ್ಮಿಗಳು ಹಾಗೂ ಶಿಲ್ಪಿಗಳಿಗೆ ತರಬೇತಿ ನೀಡಿ ಪ್ರೋತ್ಸಾಹಿಸುವ ಉದ್ದೇಶದಿಂದ ಮುಂದಿನ 5 ವರ್ಷದಲ್ಲಿ ಪ್ರತೀ ರಾಜ್ಯದಲ್ಲೂ ‘ಹುನಾರ್ ಹಬ್ (ಕೌಶಲ್ಯ ಕೇಂದ್ರ)ಗಳನ್ನು ಸ್ಥಾಪಿಸಲು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಸಮರೋಪಾದಿ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ಮೋದಿ ಸರಕಾರದ ಎರಡನೇ ಅವಧಿಯ ಆರಂಭದ 100 ದಿನದಲ್ಲೇ ಸಚಿವಾಲಯ ದೇಶದ ವಿವಿಧೆಡೆ 100 ಕೌಶಲ್ಯ ಕೇಂದ್ರವನ್ನು ಮಂಜೂರುಗೊಳಿಸಿದೆ. ಈ ಕೇಂದ್ರದಲ್ಲಿ ಆಧುನಿಕ ಅವಶ್ಯಕತೆಗೆ ಅನುಗುಣವಾಗಿ ಕುಶಲಕರ್ಮಿಗಳು, ಶಿಲ್ಪಿಗಳು ಹಾಗೂ ಸಾಂಪ್ರದಾಯಿಕ ಪಾಕಶಾಲೆ ತಜ್ಞರಿಗೆ ತರಬೇತಿ ಒದಗಿಸಲಾಗುವುದು ಎಂದವರು ಹೇಳಿದ್ದಾರೆ.

ಉತ್ತರಪ್ರದೇಶದ ಅಲಹಾಬಾದ್‌ನಲ್ಲಿರುವ ಉತ್ತರ ಮಧ್ಯವಲಯ ಸಾಂಸ್ಕೃತಿಕ ಕೇಂದ್ರದಲ್ಲಿ ಆಯೋಜಿಸಲಾದ ಕೌಶಲ್ಯ ಉತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಉತ್ಸವದಲ್ಲಿ ದೇಶದ ವಿವಿಧೆಡೆಯಿಂದ ಮಹಿಳೆಯರ ಸಹಿತ 300 ಅನುಭವಿ ಕುಶಲಕರ್ಮಿಗಳು ಮತ್ತು ಪಾಕಶಾಸ್ತ್ರಜ್ಞರು ಪಾಲ್ಗೊಂಡಿದ್ದರು. ಇವರೊಂದಿಗೆ ಸಹಭಾಗಿಗಳಾಗಿದ್ದ ಸುಮಾರು 100 ಜನರೂ ಭಾಗವಹಿಸಿದ್ದು ಉದ್ಯೋಗಾವಕಾಶ ಪಡೆದಿದ್ದಾರೆ.

10 ಲಕ್ಷಕ್ಕೂ ಅಧಿಕ ಜನ ಉತ್ಸವಕ್ಕೆ ಭೇಟಿ ನೀಡಿದ್ದು ಕೋಟ್ಯಾಂತರ ರೂಪಾಯಿ ಮೌಲ್ಯದ ಕರಕುಶಲ ಹಾಗೂ ಅಪರೂಪದ ಉತ್ಕೃಷ್ಟ ಉತ್ಪನ್ನಗಳ ವಹಿವಾಟು ನಡೆದಿದೆ. ಮುಂದಿನ ಕೌಶಲ್ಯ ಉತ್ಸವ ಹೊಸದಿಲ್ಲಿಯಲ್ಲಿ ನವೆಂಬರ್ 14ರಿಂದ 27ರವರೆಗೆ ಮತ್ತು ಮುಂಬೈಯಲ್ಲಿ ಡಿಸೆಂಬರ್ 20ರಿಂದ 31ರವರೆಗೆ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಮೋದಿ ಸರಕಾರ ರೂಪಿಸಿರುವ ಕೌಶಲ್ಯ ಕೇಂದ್ರಗಳಂತಹ ಉದ್ಯೋಗ ಆಧಾರಿತ ಯೋಜನೆಗಳು ಅಲ್ಪಸಂಖ್ಯಾತ ಸಮುದಾಯದ ಸಾಂಪ್ರದಾಯಿಕ ಕುಶಲಕರ್ಮಿಗಳ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿವೆ. ಕಳೆದ ಮೂರು ವರ್ಷದಲ್ಲಿ 2,50,000ಕ್ಕೂ ಅಧಿಕ ಕುಶಲಕರ್ಮಿಗಳು, ಶಿಲ್ಪಿಗಳು ಹಾಗೂ ಪಾಕಶಾಸ್ತ್ರ ತಜ್ಞರಿಗೆ ಉದ್ಯೋಗವಕಾಶ ಲಭಿಸಿದೆ. ಮುಂದಿನ ಐದು ವರ್ಷದಲ್ಲಿ ಇದಕ್ಕೂ ಹೆಚ್ಚು ಉದ್ಯೋಗಾವಕಾಶ ಒದಗಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಅಲಹಾಬಾದ್ ಉತ್ಸವದಲ್ಲಿ ಖ್ಯಾತ ಕಲಾವಿದರಾದ ದಿನೇಶ್ ರಘುವಂಶಿ, ನವಾಝ್ ದೇವಬಂಧಿ, ಮಹೇಂದ್ರ ಅಜ್‌ನಬಿ, ಶಂಭು ಶಿಖರ್, ರಿತು ಗೋಯಲ್, ರಾಹುಲ್ ಜೋಷಿ ಸಹಿತ ಹಲವರು ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News