ವಿವೇಕಾನಂದ ಪ.ಪೂ.ಕಾಲೇಜ್‍ನಲ್ಲಿ ತಾರಾಲಯ ವೀಕ್ಷಣೆ

Update: 2019-11-12 11:37 GMT

ಪುತ್ತೂರು: ಇಲ್ಲಿನ ವಿವೇಕಾನಂದ ಪದವಿ ಪೂರ್ವ ಕಾಲೇಜ್‍ನಲ್ಲಿ ಸಂಚಾರಿ ತಾರಾಲಯ ಸೋಮವಾರ ಮತ್ತು ಮಂಗಳವಾರ ವಿದ್ಯಾರ್ಥಿಗಳಿಗೆ ಖಗೋಳ ವಿಜ್ಞಾನದ ವಿಸ್ಮಯ, ನಕ್ಷತ್ರಗಳ ಕುರಿತು ಮಾಹಿತಿ, ಸೂರ್ಯ, ಭೂಮಿ, ಚಂದ್ರ ಹೀಗೆ ಖಗೋಳ ವಿಜ್ಞಾನದ ವಿವಿಧ ಅಧ್ಯಯನದ ಕುರಿತು ಡಿಜಿಟಲ್ ಪ್ರದರ್ಶನದ ಮೂಲಕ ತಿಳಿಸಲಾಯಿತು. 

ಶಾಲೆಯ ಅಂಗಲದಲ್ಲಿಯೇ ತಾರಾಲಯ ಎಂಬ ವ್ಯವಸ್ಥೆಯನ್ನು ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನದ ಇಲಾಖೆ ಆರಂಭಿಸಿದೆ. ಕೆಲವು ಸ್ಥಳಗಳಲ್ಲಿ ಮಾತ್ರ ಖಗೋಳ ವಿಜ್ಞಾನದ ವಿಸ್ಮಯಗಳನ್ನು ತಿಳಿಸುವ ತಾರಾಲಯಗಳು ಇವೆ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಅಲ್ಲಿಗೆ ತೆರಳಿ ಖಗೋಳ ವಿಸ್ಮಯವನ್ನು ವೀಕ್ಷಿಸುವ ಅವಕಾಶಗಳು ದೊರೆಯುವುದಿಲ್ಲ ಎಂಬ ಕಾರಣದಿಂದ ಶಾಲೆಯ ಅಂಗಲದಲ್ಲಿಯೇ ತಾರಾಲಯ ಎಂಬ ವ್ಯವಸ್ಥೆಯನ್ನು ಕರ್ನಾಟಕ ಸರ್ಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಆರಂಭಿಸಿದೆ.

ಸರಕಾರಿ ಶಾಲೆಗಳಲ್ಲಿ ಇವುಗಳ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ವಿವೇಕಾನಂದ ಪದವಿ ಪೂರ್ವ ಕಾಲೇಜ್‍ನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ. ಮತ್ತು ಸಂಚಾಲಕ ಸಂತೋಷ್ ಬೋನಂತಾಯ ಈ ಕುರಿತು ವಿಶೇಷ ಆಸಕ್ತಿ ವಹಿಸಿ ಸಂಚಾರಿ ತಾರಾಲಯವನ್ನು ಪುತ್ತೂರಿಗೆ ತರಿಸಿ ಪ್ರದರ್ಶನದ ವ್ಯವಸ್ಥೆಗೊಳಿಸಿದ್ದರು. 

ಸಂಚಾರಿ ತಾರಾಲಯ ಬಲೂನ್ ಮಾದರಿಯಲ್ಲಿ ಗಾಳಿ ತುಂಬಿಸಿ ಸಿದ್ಧಗೊಳ್ಳುತ್ತದೆ. ಭೂಮಿ ಮತ್ತು ಆಕಾಶದ ಆಕಾರದಲ್ಲಿ ಬಲೂನ್ ಸಿದ್ಧವಾಗುತ್ತದೆ. ಬಲೂನ್‍ಗೆ ಯಂತ್ರದ ಮೂಲಕ ನಿರಂತರ ಗಾಳಿ ತುಂಬಿಸಲಾಗುತ್ತದೆ. ಈ ಬಲೂನ್‍ನೊಳಗೆ ಆಕಾಶದ ಆಕಾರದಲ್ಲಿರುವ ಸ್ಥಳದಲ್ಲಿ ಡಿಜಿಟಲ್ ಪ್ರಾಜೆಕ್ಟರ್ ಮೂಲಕ ಖಗೋಳ ವಿಜ್ಞಾನದ ವಿಸ್ಮಯವನ್ನು ವಿವರಣೆ ಸಹಿತ ತೋರಿಸಲಾಗುತ್ತದೆ. ನೆಲದ ಮೇಲೆ 30 ಮಂದಿ ಕುಳಿತು ವೀಕ್ಷಿಸಬಹುದಾದಷ್ಟು ದೊಡ್ಡದಾಗಿ ಈ ಬಲೂನ್ ತಾರಾಲಯ ಇದೆ. ಪದವಿ ಪೂರ್ವ ಕಾಲೇಜ್‍ನ ವಿಜ್ಞಾನ ಮತ್ತು ಇತರ ವಿಭಾಗಗಳ ಆಸಕ್ತ ವಿದ್ಯಾರ್ಥಿಗಳು ತಾರಾಲಯವನ್ನು ವೀಕ್ಷಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News