ಪಂಜಿಕಲ್ಲು ಗ್ರಾಪಂ: ತೆರವಾದ 1 ಸ್ಥಾನಕ್ಕೆ ಚುನಾವಣೆ

Update: 2019-11-12 13:31 GMT

ಬಂಟ್ವಾಳ, ನ. 12: ಪಂಜಿಕಲ್ಲು ಗ್ರಾಪಂನಲ್ಲಿ ತೆರವಾದ ಒಂದು ಸದಸ್ಯ ಸ್ಥಾನಕ್ಕೆ ಮಂಗಳವಾರ ದಡ್ಡಲಕಾಡು ಶಾಲೆಯಲ್ಲಿ ಮತದಾನ ನಡೆಯಿತು.

ಚುನಾವಣಾಧಿಕಾರಿ ಎಂಜಿನಿಯರ್ ಮಹೇಶ್ ಹಾಗೂ ಸಹಾಯಕ ಚುನಾವಣಾಧಿಕಾರಿ ಶಿಕ್ಷಕ ಕಮಲಾಕ್ಷ ಅವರು ಸೇರಿದಂತೆ ಚುನಾವಣಾ ಸಿಬಂದಿ ಮತದಾನ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಿದರು. ಮತದಾರರು ಸರತಿಯಲ್ಲಿ ನಿಂತು ಮತ ಚಲಾಯಿಸಿದರು. 94ರ ಹರೆಯದ ಲಿಂಗಪ್ಪ ದಡ್ಡಲಕಾಡು ಅವರು ವೀಲ್‍ಚೇರ್ ಮೂಲಕ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

ಪೊಲೀಸ್ ಸಿಬಂದಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಸೈ ಪ್ರಸನ್ನ ಅವರು ಮತಗಟ್ಟೆಗೆ ಭೇಟಿ ನೀಡಿ ಶಾಂತಿಯುತ ಮತದಾನದ ಕುರಿತು ಪರಿಶೀಲಿಸಿದರು.

ಗ್ರಾಪಂನ ತೆರವಾದ ಒಂದು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪ್ರವೀಣ ಡಿ.ಸಪಲ್ಯ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸುರೇಶ್ ಜೆ.ಪೂಜಾರಿ ಅವರು ಕಣದಲ್ಲಿದ್ದು, ಎರಡೂ ಪಕ್ಷಗಳ ಪ್ರಮುಖರು ಕೂಡ ಮತಗಟ್ಟೆಯ ಹೊರಭಾಗದಲ್ಲಿ ನಿಂತು ತಮ್ಮ ಅಭ್ಯರ್ಥಿಯ ಪರ ಮತ ಚಲಾಯಿಸುವಂತೆ ವಿನಂತಿ ಮಾಡುತ್ತಿದ್ದರು.

ಇಂದು ನಡೆದ ಉಪಚುನಾವಣೆಯಲ್ಲಿ ಶೇ. 80.66 % ಮತದಾನವಾಗಿದೆ. 962ರಲ್ಲಿ 776 ಮಂದಿ ಮತ ಚಲಾಯಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News