ರಸ್ತೆಯಂಚನ್ನೇ ಅಗೆದು ಇಂಗು ಗುಂಡಿ ನಿರ್ಮಾಣ: ಸ್ಥಳೀಯರಿಂದ ಆಕ್ಷೇಪ

Update: 2019-11-12 12:55 GMT

ಉಪ್ಪಿನಂಗಡಿ: ಬಹುಮಹಡಿ ಕಟ್ಟಡಕ್ಕೆ ಸಂಬಂಧಿಸಿದ ಇಂಗು ಗುಂಡಿಯನ್ನು ರಸ್ತೆಯಂಚಿನಲ್ಲಿ ನಿರ್ಮಿಸುವ  ಮೂಲಕ ಸಾರ್ವಜನಿಕ ಜೀವ ಹಾನಿಗೆ ಕಾರಣವಾಗುವ ಭೀತಿಯನ್ನು ಸ್ಥಳೀಯರು ವ್ಯಕ್ತಪಡಿಸಿದ ಕಾರಣ ಪಂಚಾಯತ್ ಆಡಳಿತ ಇಂಗುಗುಂಡಿ ಕಾಮಗಾರಿಗೆ ತಡೆಯೊಡ್ಡಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. 

ಇಲ್ಲಿನ  ಬ್ಯಾಂಕ್ ರಸ್ತೆಯ ಹಳೆ ಬಸ್ ನಿಲ್ದಾಣ ವೃತ್ತದ ಬಳಿ ಬಹು ಮಹಡಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಈಗಾಗಲೇ ಸಾರ್ವಜನಿಕ ರಸ್ತೆಯಲ್ಲಿ ಸಂಚಾರಕ್ಕೆ ಅಡೆತಡೆಯಾಗುವಂತೆ ನಿರ್ಮಾಣ ಸಾಮಾಗ್ರಿಗಳನ್ನು ರಾಶಿ ಹಾಕಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿರುವ ನಡುವೆಯೇ ಇದೇ ಕಟ್ಟಡದವರು ಯಾವುದೇ ಇಲಾಖಾನುಮತಿ ಪಡೆಯದೆ ರಸ್ತೆ ಮಾರ್ಜಿನ್ ಸ್ಥಳವನ್ನು ಅತಿಕ್ರಮಿಸಿ ಆಳವಾದ ಇಂಗು ಗುಂಡಿಯನ್ನ ನಿರ್ಮಿಸಲು  ಗುಂಡಿ ತೋಡಿದ್ದಾರೆ. ಸಾರ್ವಜನಿಕ ಬಳಕೆಯ ಸ್ಥಳವಾಗಿರುವ ರೋಡ್ ಮಾರ್ಜಿನ್‍ನ ಸ್ಥಳದಲ್ಲಿ ಈ ರೀತಿ ಅಪಾಯಕಾರಿ ಇಂಗು ಗುಂಡಿಯನ್ನು ನಿರ್ಮಿಸಿದರೆ ವಾಹನ ಪ್ರಯಾಣಿಕರಿಗೆ, ಪಾದಾಚಾರಿಗಳಿಗೆ  ಅಪಾಯವುಂಟಾಗುವ ಭೀತಿ ಎದುರಾಗಿದೆ. ಮಾತ್ರವಲ್ಲದೆ ಸನಿಹದಲ್ಲೇ ಇರುವ ಚರಂಡಿಗೂ ಸಮಸ್ಯೆಯುಂಟಾಗುವ ಸಾಧ್ಯತೆ ಇದೆ. ಪ್ರತಿಯೊಂದು ಕಟ್ಟಡಕ್ಕೆ ಅತ್ಯಗತ್ಯವಾದ ಶೌಚಾಲಯದ ಗುಂಡಿಗಳನ್ನಾಗಲಿ, ಇಂಗುಗುಂಡಿಗಳನ್ನಾಗಲಿ ಅವರವರ ಭೂಮಿಯಲ್ಲೇ ನಿರ್ಮಿಸಬೇಕೆಂಬ ನಿಯಮಾವಳಿ ಇದ್ದರೂ, ತಮ್ಮ ಭೂಮಿಯನ್ನೆಲ್ಲಾ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡು ಅದಕ್ಕೆ ಸಂಬಂಧಿಸಿದ ಮೂಲಭೂತ ಅವಶ್ಯಕತೆಗಾಗಿ ಸರಕಾರಿ ಸ್ವಾಮ್ಯದ ಭೂಮಿಯನ್ನು ಕಬಳಿಸುವ ಮೂಲಕ ಕಾನೂನು ಉಲ್ಲಂಘಿಸುವ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಪಂಚಾಯತ್ ಅಡಳಿತಕ್ಕೆ ದೂರು ಸಲ್ಲಿಸಿದ್ದಾರೆ.

ಗ್ರಾ.ಪಂ. ಗಮನಕ್ಕೆ ತಾರದೇ ರಸ್ತೆಯಂಚಿನಲ್ಲಿ ಇಂಗು ಗುಂಡಿಯನ್ನು ದಿಢೀರ್ ಆಗಿ ಇಲ್ಲಿ ನಿರ್ಮಿಸಲಾಗಿದೆ. ಇದಕ್ಕೆ ಸಾರ್ವಜನಿಕರ ಆಕ್ಷೇಪವಿದೆ. ಗ್ರಾ.ಪಂ. ವತಿಯಿಂದ ಸಂಬಂಧಪಟ್ಟ ಕಟ್ಟಡ ಮಾಲೀಕರಿಗೆ ನೊಟೀಸ್ ನೀಡಲಾಗಿದೆ. ತಕ್ಷಣವೇ ಇಂಗು ಗುಂಡಿ ಕಾಮಗಾರಿಯನ್ನು  ಸ್ಥಗಿತಗೊಳಿಸಲು ಸೂಚನೆ ನೀಡಿದ್ದು, ಈ ಕಟ್ಟಡದ ಮಾಲೀಕರಿಗೆ ಸೇರಿದ ಜಮೀನಿನಲ್ಲೇ ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. 

-ಮಾಧವ ಕೆ., ಅಭಿವೃದ್ಧಿ ಅಧಿಕಾರಿ, ಉಪ್ಪಿನಂಗಡಿ ಗ್ರಾ.ಪಂ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News