ಮೂಡುಬಿದಿರೆ ಕಂಬಳ ಸಮಿತಿ ಸಮಾಲೋಚನಾ ಸಭೆ

Update: 2019-11-12 13:58 GMT

ಮೂಡುಬಿದಿರೆ: ಕಂಬಳವು ಜನಪ್ರಿಯವಾದ ಜನಪದ ಕ್ರೀಡೆಯಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಡುಬಿದಿರೆ ಕಂಬಳವು ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಕನ್ನಡ ಸಂಸ್ಕೃತಿ ಇಲಾಖೆ ಮುಖಾಂತರ ಕಡಲಕೆರೆ ನಿಸರ್ಗಧಾಮ ಅಭಿವೃದ್ಧಿಗಾಗಿ ಮೂರು ಕೋಟಿ ಹಾಗೂ 10 ಎಕರೆ ಜಾಗ ಹೊಂದಿರುವ ಮೂಡುಬಿದಿರೆ ಕಂಬಳಕ್ಕಾಗಿ ಎರಡು ಕೋಟಿ ರೂ. ಅನುದಾನದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ನಮ್ಮ ಸಂಸ್ಕೃತಿ, ಗುತ್ತಿನ ಮನೆ ಪರಂಪರೆಯ ಮಾದರಿಯನ್ನು ಇಟ್ಟಿಕೊಂಡು ಮುಂದಿನ ವರ್ಷ ಶಾಶ್ವತವಾದ ಬೃಹತ್ ವೇದಿಕೆಯನ್ನು ನಿರ್ಮಿಸುವುದು ಸಹಿತ ಹಲವಾರು ಯೋಜನೆಗಳು ಸಮಿತಿಯ ಮುಂದಿದೆ ಎಂದು ಶಾಸಕ, ಮೂಡುಬಿದಿರೆ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು. 

ಒಂಟಿಕಟ್ಟೆ-ವೀರ ರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ಡಿ.21ರಂದು ನಡೆಯುವ 17ನೇ ವರ್ಷದ ಮೂಡುಬಿದಿರೆ ಕೋಟಿ ಚೆನ್ನಯ ಜೋಡುಕರೆ ಕಂಬಳದ ಪೂರ್ವಭಾವಿಯಾಗಿ ಮಂಗಳವಾರ ಸಮಾಜ ಮಂದಿರದಲ್ಲಿ ನಡೆದ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಸಮಿತಿ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಮಾತನಾಡಿ, ಪೆಟಾವು ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಹಾಕುವಾಗ ಬಾರಾಡಿಬೀಡು, ಮೂಡುಬಿದಿರೆ, ತಿರುವೈಲುಗುತ್ತು ಕಂಬಳದ ಬಗ್ಗೆ ಪ್ರಸ್ತಾಪಿಸಿರುವುದರಿಂದ ನಾವು ಕಾನೂನು ರೀತಿಯಲ್ಲಿ ಶಿಸ್ತುಬದ್ಧವಾಗಿ ಕಂಬಳ ನಡೆಸಬೇಕಾಗಿದೆ. ನೆಲದ ಕಾನೂನನ್ನು ಗೌರವಿಸಿ, ನಮ್ಮ ಕಂಬಳ ಸಂಸ್ಕೃತಿಯನ್ನು ಉಳಿಸೋಣ. ಉನ್ನತ ಶಿಕ್ಷಣ ಪಡೆದವರು ಕಂಬಳದ ಓಟಗಾರರಾಗಿ ಇತ್ತೀಚಿನ ದಿನಗಳಲ್ಲಿ ಮಿಂಚುತ್ತಿರುವುದು ಆಶಾದಾಯಕ ಬೆಳವಣಿಗೆ. ರಾಣಿ ಅಬ್ಬಕ್ಕಳ ಪ್ರತಿಮೆ ಈ ಬಾರಿಯ ಕಂಬಳದಲ್ಲಿ ಅನಾವರಣಗೊಳುತ್ತಿರುವುದು ಚಾರಿತ್ರಿಕ ಬೆಳವಣಿಗೆ. ಕಂಬಳ ಸಂಸ್ಕೃತಿಯನ್ನು ಸಾರುವ ಮ್ಯೂಸಿಯಂ ಅನ್ನು ಮೂಡುಬಿದಿರೆಯಲ್ಲಿ ನಿರ್ಮಿಸುವ ಚಿಂತನೆ ನಡೆಯುತ್ತಿದೆ ಎಂದರು.

ಕುಡಿಯುವ ನೀರಿನ ವ್ಯವಸ್ಥೆ, ಪೆಂಡಾಲ್ ವ್ಯವಸ್ಥೆ ಸಹಿತ ಹಲವಾರು ಕೆಲಸಗಳನ್ನು ಈ ಬಾರಿ ಮಾಡಲಾಗಿದೆ.

ಕಂಬಳ ಸಾಧಕರನ್ನು, ಕಂಬಳ ಉಳಿವಿಗೆ ಶ್ರಮಿಸಿದ ಜನಪ್ರತಿನಿಧಿಗಳನ್ನು ಆಹ್ವಾನಿಸುವಂತೆ ಮಂಗಳೂರು ಎಪಿಎಂಸಿ ಸದಸ್ಯ ಕೃಷ್ಣರಾಜ ಹೆಗ್ಡೆ, ವಕೀಲ ಕೆ.ಆರ್ ಪಂಡಿತ್ ಸಲಹೆ ನೀಡಿದರು.

ಜಿಲ್ಲಾ ಕಂಬಳ ಸಮಿತಿಯ ಕೋಶಾಧಿಕಾರಿ ರೆಂಜಾಳಕಾರ್ಯ ಸುರೇಶ್ ಕೆ.ಪೂಜಾರಿ, ಮೂಡುಬಿದಿರೆ ಕಂಬಳ ಸಮಿತಿಯ ಉಪಾಧ್ಯಕ್ಷರಾದ ಸುದರ್ಶನ್ ಎಂ.,ಕೆ.ಪಿ ಸುಚರಿತ ಶೆಟ್ಟಿ ಉಪಸ್ಥಿತರಿದ್ದರು.  ಗಣೇಶ್ ಪೂಜಾರಿ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News